ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.14 : ಕಾಂತರಾಜ್ ವರದಿ ಹಾಗೂ ಸದಾಶಿವ ಆಯೋಗದ ಒಳ ಮೀಸಲಾತಿ ವರದಿಯನ್ನು ಜಾರಿಗೆ ತರುವಂತೆ ಅಹಿಂದ ಜಾತಿಗಳ ಜಾಗೃತಿ ವೇದಿಕೆಯಿಂದ ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಹಿಂದುಳಿದ ಜಾತಿ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಧರಣಿಯನ್ನುದ್ದೇಶಿಸಿ ಮಾತನಾಡುತ್ತ ಮೊದಲಿನಿಂದಲೂ ವ್ಯವಸ್ಥಿತವಾಗಿ ವಂಚನೆಗೊಳಗಾಗುತ್ತಿರುವ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಶೋಷಿತ ಸಮುದಾಯವನ್ನು ಒಂದೇ ವೇದಿಕೆಗೆ ತಂದು ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗದಲ್ಲಿ ದೊಡ್ಡ ಸಮಾವೇಶ ಏರ್ಪಡಿಸಿ ಸರ್ಕಾರಕ್ಕೆ ಶಕ್ತಿ ಪ್ರದರ್ಶಿಸುವ ಮೂಲಕ ಅಹಿಂದ ಜಾತಿಗಳು ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಹೇಳಿದರು.
ಹತ್ತು ಲಕ್ಷ ಜನರನ್ನು ಸಮಾವೇಶಕ್ಕೆ ಸೇರಿಸುವ ಮೂಲಕ ಹಿಂದುಳಿದ ಜಾತಿ ವರ್ಗಗಳು ತಮ್ಮ ನ್ಯಾಯಯುತವಾದ ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. 1931 ರಲ್ಲಿ ಬ್ರಿಟೀಷರ ಕಾಲದಲ್ಲಿ ಸರ್ವೆ ಆಗಿತ್ತು. 90 ವರ್ಷಗಳು ಕಳೆದರೂ ಹಿಂದುಳಿದ ಜಾತಿಗಳ ನಿಖರ ಸಮೀಕ್ಷೆಯಾಗಿರಲಿಲ್ಲ.
ಅಹಿಂದ ನಾಯಕ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಒಂದು ಲಕ್ಷ ಅರವತ್ತು ಸಾವಿರ ಶಿಕ್ಷಕರುಗಳನ್ನು ಬಳಸಿಕೊಂಡು 162 ಕೋಟಿ ರೂ.ಗಳನ್ನು ಖರ್ಚು ಮಾಡಿ ಸಮೀಕ್ಷೆ ನಡೆಸಿದ್ದಾರೆ. ಆಯೋಗದ ವರದಿಯನ್ನು ಜಾರಿಗೆ ತರುವುದು ಸರ್ಕಾರದ ಕರ್ತವ್ಯ ಎಂದು ಒಪ್ಪಿಕೊಂಡಿರುವ ಸಿದ್ದರಾಮಯ್ಯನವರ ಕೈಬಲಪಡಿಸುವುದು ಹಿಂದುಳಿದ ಜಾತಿ ವರ್ಗಗಳ ಜವಾಬ್ದಾರಿ ಎಂದು ತಿಳಿಸಿದರು.
ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಸಿ.ಕೆ.ಮಹೇಶ್ ಮಾತನಾಡಿ ಸರ್ಕಾರ ಆಳುವವರು ಬ್ರಾಹ್ಮಣ್ಯ ಮನಸ್ಸುಳ್ಳವರಾಗಿರುವುದರಿಂದ ಪ್ರಬಲ ಜಾತಿಗಳು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಮೇಲ್ಜಾತಿಯವರು ಪಕ್ಷದ ಸಿದ್ದಾಂತಕ್ಕೆ ಬದ್ದರಾಗಿರುವುದಿಲ್ಲ. ಬದಲಾಗಿ ಜಾತಿಗಳ ಹಿತಕ್ಕೆ ಬದ್ದರಿರುತ್ತಾರೆ. ಹಿಂದುಳಿದವರು ಮೇಲ್ಜಾತಿಯವರಂತೆ ಜಾತಿಗಳಿಗೆ ಬದ್ದರಾದಾಗ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಬಲಿಷ್ಟರಾಗಬಹುದು ಎಂದು ಹೇಳಿದರು.
ಅಧಿಕ ಪ್ರಮಾಣದ ಸಂಪತ್ತು, ಅಧಿಕಾರ ಯಾರಿಗೆ ಸೇರಬೇಕಿತ್ತು ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಸಂಶೋಧನೆಯ ಅಗತ್ಯವಿಲ್ಲ. ನಿಸ್ಸಂದೇಹವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಸಿಗಬೇಕು. ಅಹಿಂದ ಜಾತಿಗಳ ಮತಗಳನ್ನು ಸರಕುಗಳನ್ನಾಗಿ ಮಾರ್ಪಡಿಸಿಕೊಂಡಿರುವ ಮೇಲ್ಜಾತಿಯವರು ರಾಜಕೀಯವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಹಾಗಾಗಿ ದೊಡ್ಡ ಸಂಖ್ಯೆಯಲ್ಲಿರುವ ಅಹಿಂದ ಜಾತಿಗಳು ಇನ್ನು ಹೀನಾಯ ಸ್ಥಿತಿಯಲ್ಲಿರುವುದರಿಂದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರು ಜಾಗೃತರಾಗಬೇಕಿದೆ ಎಂದು ಎಚ್ಚರಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಯಾದವ ಸಮಾಜದ ಮುಖಂಡ ಸಿ.ಟಿ.ಕೃಷ್ಣಮೂರ್ತಿ ಮಾತನಾಡುತ್ತ ಅಹಿಂದ ಜಾತಿಗಳು ಶೇ.80 ರಷ್ಟಿದ್ದಾರೆನ್ನುವುದು ಸತ್ಯ. ಆದರೂ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರಿಗೆ ಸರ್ಕಾರದಿಂದ ಸಿಕ್ಕಿರುವ ಸೌಲತ್ತು ಮಾತ್ರ ತುಂಬಾ ಕಡಿಮೆ.
ಇದು ಸಂವಿಧಾನದ ಆಶಯಗಳಿಗೆ ವಿರುದ್ದವಾದುದು ಎನ್ನುವುದನ್ನು ಅರಿತು ಹಿಂದಿನಿಂದಲೂ ಅಹಿಂದ ಜಾತಿಗಳು ಹೋರಾಟ ಮಾಡಿಕೊಂಡು ಬರುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಂತರಾಜ್ ವರದಿ ಹಾಗೂ ಸದಾಶಿವ ಆಯೋಗದ ಒಳ ಮೀಸಲಾತಿ ವರದಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಮಾಜಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜಿ.ಪಿ.ಗೋಪಾಲ್, ಹಿಂದುಳಿದ ವರ್ಗಗಳ ವೇದಿಕೆ ಸದಸ್ಯ ಮೆಹಬೂಬ್‍ಪಾಷ, ಜವಳಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಜಯರಾಂ, ವಿಶ್ವಕರ್ಮ ಸಮಾಜದ ಮುಖಂಡ ಸುಜ್ಞಾನದೇವ್, ಪ್ರಸನ್ನಕುಮಾರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಜೆ.ಜಿ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಬಿ.ಕಾಂತರಾಜ್, ಹೆಚ್.ಸಿ.ನಿರಂಜನಮೂರ್ತಿ, ಹೆಚ್.ಮಂಜಪ್ಪ, ಮಾಜಿ ಉಪಾಧ್ಯಕ್ಷರುಗಳಾದ ಡಿ.ದುರುಗೇಶ್, ಮಲ್ಲಿಕಾರ್ಜುನ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಜ್ಜ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಎಸ್.ಎನ್.ರವಿಕುಮಾರ್ ಟಿ.ಸ್ವಾಮಿ, ಮಾರಣ್ಣ, ಉಪ್ಪಾರ ಸಮಾಜದ ಆರ್.ಮೂರ್ತಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ನಗರಸಭೆ ಸದಸ್ಯರುಗಳಾದ ನಸ್ರುಲ್ಲಾ, ದೀಪು, ಮಾಜಿ ಸದಸ್ಯರುಗಳಾದ ಫಕೃದ್ದಿನ್, ತಿಪ್ಪೇಸ್ವಾಮಿ, ಲೇಖಕ ಹೆಚ್.ಆನಂದ್‍ಕುಮಾರ್, ಎಸ್.ಎಂ.ಎಸ್.ಟಿ.ಫಯಾಜ್, ಎಂ.ಪಿ.ಶಂಕರ್, ತಕ್ಕಡಿ ಸುರೇಶ್, ಮೃತ್ಯುಂಜಯ, ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಎಸ್.ಲಕ್ಷ್ಮಿಕಾಂತ್, ದಲಿತ ಮುಖಂಡ ರಘು ಇನ್ನು ಅನೇಕರು ಧರಣಿಯಲ್ಲಿ ಭಾಗವಹಿಸಿದ್ದರು.