ಹಾವೇರಿ, ಜೂನ್ 28 : ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಟಿಟಿ ವಾಹನ ಡಿಕ್ಕಿಯಾಗಿ ವಾಹನದಲ್ಲಿದ್ದ 7 ಮಂದಿ ಮಹಿಳೆಯರು ಸೇರಿದಂತೆ 13 ಜನ ಮೃತಪಟ್ಟಿದ್ದು, ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ.
ಜಿಲ್ಲೆಯ ಬ್ಯಾಡಗಿ (Byadagi) ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ (4) ಈ ಭೀಕರ ರಸ್ತೆ ಅಪಘಾತ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ನಡೆದಿದೆ ಎನ್ನಲಾಗಿದೆ. ಘಟನೆಗೆ ಚಾಲಕನ ಅಜಾಗರೂಕತೆ ಕಾರಣ ಎಂದು ತಿಳಿದುಬಂದಿದೆ. ನಿದ್ದೆ ಮಂಪರಿನಲ್ಲಿ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಮೃತರನ್ನು ಪರಶುರಾಮ್(45), ಭಾಗ್ಯ(40), ನಾಗೇಶ(50), ವಿಶಾಲಾಕ್ಷಿ(40), ಅರ್ಪಿತಾ(18), ಸುಭದ್ರಾ ಬಾಯಿ(65), ಪುಣ್ಯ(50), ಮಂಜುಳಾಬಾಯಿ, ಚಾಲಕ ಆದರ್ಶ್(23), ಮಾನಸ(24), ರೂಪಾ(40), ಮಂಜುಳಾ(50) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಶಿವಮೂಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್.ಎ.ಹಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ಟಿಟಿ ವಾಹನದಲ್ಲಿದ್ದ 15 ಮಂದಿ ಸವದತ್ತಿ ರೇಣುಕಾ ಯಲ್ಲಮ್ಮ ದರ್ಶನ ಪಡೆದು ಮರಳಿ ಊರಿಗೆ ವಾಪಾಸಾಗುವ ವೇಳೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಒಂಬತ್ತು ಮಹಿಳೆಯರು, ಎರಡು ಪುಟ್ಟ ಕಂದಮ್ಮಗಳು, ಇಬ್ಬರು ಗಂಡು ಮಕ್ಕಳು, ಡ್ರೈವರ್ ಮೃತ ದುರ್ದೈವಿಗಳು.
ಮೃತ ದೇಹಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿದ್ದಾರೆ. ಬ್ಯಾಡಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಅಂಶಿಕುಮಾರ್ ಮಾಹಿತಿ ನೀಡಿದ್ದಾರೆ.