ಚಿಕ್ಕಮಗಳೂರು: ಈಗಾಗಲೇ ರಾಜ್ಯದಲ್ಲಿ ಮಂಗನ ಕಾಯಿಲೆ ಸಾಕಷ್ಟು ಆತಂಕ ಸೃಷ್ಟಿಸಿದೆ. ಇದೀಗ ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಕಂಡು ಬಂದ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ರಾಜ್ಯದಲ್ಲಿ ಇದೇ ಮೊದಲ ಬಲಿಯಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಚಿಕ್ಕಮಗಳೂರಿನ ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ 79 ವರ್ಷದ ವ್ಯಕ್ತಿ ಬಲಿಯಾಗಿದ್ದಾನೆ. ಮೃತ ವ್ಯಕ್ತಿಗೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಕಾಡುತ್ತಿತ್ತು. ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದು, ಮೃತ ವ್ಯಕ್ತಿಯ ದೇಹವನ್ನು ಪರೀಕ್ಷೆ ಮಾಡಿದಾಗ, ಕೆಎಫ್ಡಿ ಪತ್ತೆಯಾಗಿದೆ. ಇದು ಮಲೆನಾಡ ಭಾಗದ ಜನರಲ್ಲಿ ಭಯದ ವಾತಾವರಣವನ್ನುಂಟು ಮಾಡಿದೆ.
ಮಂಗನ ಕಾಯಿಲೆ ಅಷ್ಟಾಗಿ ಏನು ಕಾಡುತ್ತಾ ಇರಲಿಲ್ಲ. ಹೀಗಾಗಿ ಇದಕ್ಕೆ ಪ್ರತ್ಯೇಕ ಔಷಧಿಯನ್ನು ಕೂಡ ಇನ್ನು ಹೊರ ತಂದಿಲ್ಲ. ಈಗ ರಾಜ್ಯದೆಲ್ಲೆಡೆ ಮಂಗನ ಕಾಯಿಲೆ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಾಕಷ್ಟು ಜನರಿಗೆ ಮಂಗನ ಕಾಯಿಲೆ ವೈರಸ್ ಕಾಣಿಸಿಕೊಂಡಿದೆ. ಇದರ ಜೊತೆಗೆ ಮಕ್ಕಳಿಗೆ ಮಂಗನ ಬಾಹು ಹೆಚ್ಚಿನ ನೋವನ್ನು ನೀಡುತ್ತಿದೆ. ಈಗ ಸರ್ಕಾರದ ಮುಂದೆ ಈ ಕಾಯಿಲೆ ಹರಡದಂತೆ, ಯಾವುದೇ ಪ್ರಾಣಾಪಾಯವಾಗದಂತೆ ನೋಡಿಕೊಳ್ಳುವ ಸವಾಲು ಇದೆ. ಈಗಾಗಲೇ ಸರ್ಕಾರ ಕೂಡ ಮುನ್ನಚ್ಚರಿಕಾ ಕ್ರಮವನ್ನು ವಹಿಸುತ್ತಿದೆ. ಜನ ಕೂಡ ಈ ಕಾಯಿಲೆ ಉಲ್ಬಣವಾಗದಂತೆ ನೋಡಿಕೊಳ್ಳಲು ಹುಷಾರಾಗಿ ಇರಬೇಕಾಗಿದೆ, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಉತ್ತಮ.