ಬೆಂಗಳೂರು: ಸಿನಿಮಾ ನಿರ್ಮಾಣದ ಜೊತೆ ಜೊತೆಗೆ ಹಲವು ಉದ್ಯಮಗಳನ್ನು ಮಾಡುತ್ತಿದ್ದ ಸೌಂದರ್ಯ ಜಗದೀಶ್ ಕಳೆದ ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಇದೀಗ ಅವರ ಸಾವಿಗೆ ಕಾರಣವೇನು ಎಂಬುದು ತಿಳಿದು ಬಂದಿದ್ದು, ಡೆತ್ ನೋಟ್ ಕೂಡ ಪತ್ತೆಯಾಗಿದೆ.
ಸೌಂದರ್ಯ ಜಗದೀಶ್ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಆ ಡೆತ್ ನೋಟ್ ನಲ್ಲಿ ನಷ್ಟದ ವಿಚಾರ ಪತ್ತೆಯಾಗಿದೆ. ಈ ಡೆತ್ ನೋಟ್ ಆಧರಿಸಿ ಪೊಲೀಸರು ಕೂಡ ತನಿಖೆ ಕೈಗೊಂಡಿದ್ದರು. ಇದೀಗ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ ನಲ್ಲಿ ಮೂವರ ಮೇಲೆ ಎಫ್ಐಆರ್ ಕೂಡ ದಾಖಲಾಗಿದೆ. ಸೌಂದರ್ಯ ಜಗದೀಶ್ ತನ್ನ ಬಿಸಿನೆಸ್ ಲಾಸ್ ಬಗ್ಗೆ ಆ ಡೆತ್ ನೋಟ್ ನಲ್ಲಿ ನಮೂದಿಸಿದ್ದರು.
ಜೆಟ್ ಲ್ಯಾಗ್ ಪಬ್ ಉದ್ಯಮದ ಜೊತೆಗೆ ಸೌಂದರ್ಯ ಕನ್ಸ್ಟ್ರಕ್ಷನ್ ಕಂಪನಿಯನ್ನು ಸೌಂದರ್ಯ ಜಗದೀಶ್ ಪಾಟ್ನರ್ ಶಿಪ್ ನಲ್ಲಿ ನಡೆಸುತ್ತಿದ್ದರು. ಆದರೆ ಬಿಸಿನೆಸ್ ನಷ್ಟವಾಗುವುದಕ್ಕೆ ಪಾಲುದಾರರೇ ಕಾರಣ ಎಂಬುದನ್ನು ಸೌಂದರ್ಯ ಜಗದೀಶ್ ಅದರಲ್ಲಿ ತಿಳಿಸಿದ್ದಾರೆ. ಇದರಿಂದಾಗಿ 60 ಕೋಟಿ ರೂಪಾಯಿ ನಷ್ಟವಾಗಿದೆ ಎಂಬುದನ್ನು ಬರೆದಿದ್ದರು ಎನ್ನಲಾಗಿದೆ. ಈ ಮೂಲಕ ಸೌಂದರ್ಯ ಜಗದೀಶ್ ಸಾವಿಗೆ ಈ ಸಾಲದ ಹೊರೆಯು ಕಾರಣ ಎನ್ನಲಾಗಿದೆ.
ಇನ್ನು ಈ ಕಂಪನಿಯ ನಷ್ಟದ ವಿಚಾರಕ್ಕೆ ಪಾಲುದಾರರ ವಿರುದ್ದ ಸೌಂದರ್ಯ ಜಗದೀಶ್ ಅವರ ಪತ್ನಿ ಶಶಿರೇಖಾ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಜಗದೀಶ್ ಬಿಸಿನೆಸ್ ಪಾಟ್ನರ್ ಆಗಿದ್ದ ಸುರೇಶ್, ಹೊಂಬಣ್ಣ, ಸುದೀಂದ್ರ ಎಂಬುವವರ ಮೇಲೆ ದೂರು ದಾಖಲಾಗಿದೆ.