ಚಿಕ್ಕಬಳ್ಳಾಪುರ: ಎರಡು ಬಾರಿ ಡೇಟ್ ಫಿಕ್ಸ್ ಆಗಿ ರದ್ದಾಗಿದ್ದ ಜನಸ್ಪಂದನಾ ಕಾರ್ಯಕ್ರಮ ಇದೀಗ ನಾಳೆಗೆ ತಯಾರಿ ನಡೆಸಿಕೊಂಡಿದೆ. ನಾಳೆ ಯಾವುದೇ ಕಾರಣಕ್ಕೂ ಕಾರ್ಯಕ್ರಮ ಮುಂದೂಡಿಕೆಯಾಗುವುದಿಲ್ಲ ಎಂಬ ಮಾತನ್ನು ಸಚಿವ ಸುಧಾಕರ್ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ನಡೆಯುವ ದೊಡ್ಡ ಸಮಾವೇಶದಲ್ಲಿ ಏನೆಲ್ಲಾ ವ್ಯವಸ್ಥೆಯಾಗಿದೆ. ಎಷ್ಟು ಜನ ಸೇರುವ ನಿರೀಕ್ಷೆ ಇದೆ ಎಂಬುದನ್ನು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವ ಸುಧಾಕರ್ ಅವರು, ಬಿಜೆಪಿ ಆಡಳಿತಕ್ಕೆ ಬಂದು ಮೂರು ವರ್ಷವಾಗಿದೆ. ಬಿಎಸ್ವೈ 2 ವರ್ಷ, ಬೊಮ್ಮಾಯಿ ಅವರು 1 ವರ್ಷ ಪೂರೈಸಿದ್ದಾರೆ. ಸರ್ಕಾರದ ರಿಪೊರ್ಟ್ ಕಾರ್ಡ್ ಜನರ ಮುಂದಿಡಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಿಜೆಪಿ ಸಾಮರ್ಥ್ಯ ಪ್ರಶ್ನಿಸುವವರಿಗೆ ಇದು ಉತ್ತರವಾಗಲಿದೆ. ನಾಳಿನ ಕಾರ್ಯಕ್ರಮ ಜನರಿಗೆ ಒಂದು ಸಂದೇಶ. ಇದಕ್ಕಾಗಿ 40 ಎಕರೆ ಜಾಗದಲ್ಲಿ ನಾಳಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
5 ಲಕ್ಷ ಜನರಿಗೆ ಊಟದ ವ್ಯವಸ್ಥೆಯಾಗಿದೆ. 200 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೂ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಇನ್ನು ಈ ಜನಸ್ಪಂದನಾ ಕಾರ್ಯಕ್ರಮಕ್ಕೆ ಜೆ ಪಿ ನಡ್ಡಾ ಅವರನ್ನು ಆಹ್ವಾನಿಸಲಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಗಿಯಾಗಲಿದ್ದಾರೆ.