ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.07 : ತುಮಕೂರು-ಚಿತ್ರದುರ್ಗ-ದಾವಣಗೆರೆ ನಡುವೆ 191 ಕಿ.ಮೀ ಉದ್ದದ ನೇರ ರೈಲು ಮಾರ್ಗವನ್ನು ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ವೆಚ್ಚ ಹಂಚಿಕೆ ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಗಿದೆ.
ಇದರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಉಚಿತವಾಗಿ ಅವಶ್ಯವಾಗಿರುವ ಭೂಮಿ ಹಾಗೂ ಶೇಕಡ 50 ರಷ್ಟು ನಿರ್ಮಾಣ ವೆಚ್ಚವನ್ನು ಹಂಚಿಕೊಳ್ಳುತ್ತಿದೆ. ಒಟ್ಟಾರೆ ಯೋಜನೆಯ ವೆಚ್ಚ ರೂ.2,142.35 ಕೋಟಿಯಾಗಲಿದ್ದು, ಮಾರ್ಚ್ 2024 ರವರೆಗೆ ರೂ.359.32 ಕೋಟಿಯಷ್ಟು ವೆಚ್ಚವನ್ನು ಈ ಯೋಜನೆಗಾಗಿ ಮಾಡಲಾಗಿದೆ. 2024-25 ರ ರೈಲ್ವೆ ಬಜೆಟ್‍ನಲ್ಲಿ 150 ಕೋಟಿ ಅನುದಾನವನ್ನು ಈ ಯೋಜನೆಗಾಗಿ ಒದಗಿಸಲಾಗಿದೆ ಎಂದು
ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‍ರವರು ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳ ವಿವರ ಹಾಗೂ ದಾವಣಗೆರೆ-ತುಮಕೂರು ವಯಾ ಚಿತ್ರದುರ್ಗ ನೇರ ರೈಲುಮಾರ್ಗದ ಯೋಜನೆಯ ಪ್ರಗತಿ ವಿವರ ಕುರಿತು ಸಂಸದ ಗೋವಿಂದ ಕಾರಜೋಳ ಸಂಸತ್ತಿನಲ್ಲಿ ಮಾಹಿತಿ ಕೇಳಿದರು.
ಸಂಸದರ ಪ್ರಶ್ನೆಗೆ ಉತ್ತರ ನೀಡಿರುವ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‍ರವರು ರೈಲ್ವೆ ಯೋಜನೆಗಳನ್ನು ವಲಯವಾರು ಮಂಜೂರು ಮಾಡಲಾಗುತ್ತದೆ. 01.04.2024 ರ ಮಾಹಿತಿಯಂತೆ ಕರ್ನಾಟಕ ರಾಜ್ಯದಲ್ಲಿ ಅಂದಾಜು 47,016 ಕೋಟಿ ವೆಚ್ಚದ 21 ಹೊಸ ಮಾರ್ಗಗಳು ಹಾಗೂ 10 ಡಬ್ಲಿಂಗ್ ಕಾಮಗಾರಿಗಳು ಸೇರಿ ಒಟ್ಟು 3,840 ಕಿ.ಮೀ ಉದ್ದದ 31 ಮೂಲಸೌಲಭ್ಯ ಯೋಜನೆಗಳು ವಿವಿಧ ಹಂತದ ಪ್ಲಾನಿಂಗ್/ಅನುಮೋದನೆ/ಪ್ರಗತಿ ಹಂತದಲ್ಲಿವೆ ಎಂದು ತಿಳಿಸಿದ್ದಾರೆ. ಇದರಲ್ಲಿ 1,302 ಕಿ.ಮೀ ಉದ್ದದ ಮಾರ್ಗದ ಕೆಲಸ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲಾಗಿದೆ ಮತ್ತು ಮಾರ್ಚ್ 2024 ರವರೆಗೆ ರೂ.17,382 ಕೋಟಿ ಅನುದಾನವನ್ನು ವೆಚ್ಚ ಮಾಡಲಾಗಿದೆ.
21 ಹೊಸ ಮಾರ್ಗಗಳ ಪೈಕಿ 33,125 ಕೋಟಿ ವೆಚ್ಚದ 2,556 ಕಿ.ಮೀ. ಉದ್ದದ ಮಾರ್ಗಗಳಲ್ಲಿ ಈಗಾಗಲೇ ಮಾರ್ಚ್ 2024 ರ ಅಂತ್ಯದ ವೇಳೆಗೆ ರೂ.7,592 ಕೋಟಿ ವೆಚ್ಚ ಮಾಡಿ 395 ಕಿ.ಮೀ ಉದ್ದದ ಮಾರ್ಗವನ್ನು ಪೂರ್ಣಗೊಳಿಸಲಾಗಿದೆ. ರೂ. 13,891 ಕೋಟಿ ವೆಚ್ಚದ 1,284 ಕಿ.ಮೀ. ಉದ್ದದ 10 ಡಬ್ಲಿಂಗ್ ಯೋಜನೆಗಳ ಪೈಕಿ ಈಗಾಗಲೇ ರೂ.9791 ಕೋಟಿ ವೆಚ್ಚ ಮಾಡಿ 907 ಕಿ.ಮೀ ಡಬ್ಲಿಂಗ್ ಕಾಮಗಾರಿ ಮುಗಿಸಲಾಗಿದೆ.
2014 ರಿಂದ ಕರ್ನಾಟಕ ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ಅನುದಾನ ಹಂಚಿಕೆ ಮತ್ತು ಯೋಜನೆಗಳ ಪೂರ್ಣಗೊಳಿಸುವಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2009-2014 ರವರೆಗೆ ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ ರೂ. 7,835 ದೊರಕಿದ್ದರೆ, ಅದೇ ಮೋದಿಜಿ ಆಡಳಿತಾವಧಿಯಲ್ಲಿ 2024-25 ನೇ ಸಾಲಿನ ಒಂದೇ ವರ್ಷದಲ್ಲಿ ರೂ.7,559 ಕೋಟಿ ಅನುದಾವನ್ನು ರಾಜ್ಯಕ್ಕೆ ನೀಡಲಾಗಿದೆ, ಇದು ಯು.ಪಿ.ಎ. ಆಡಳಿತಾವಧಿಯಲ್ಲಿ ನೀಡಿದ ಅನುದಾನಕ್ಕೆ ಹೋಲಿಕೆ ಮಾಡಿದರೆ ಒಂದೇ ವರ್ಷದಲ್ಲಿ ಬರೋಬ್ಬರಿ 9 ಪಟ್ಟು ಹೆಚ್ಚಿನ ಅನುದಾನವನ್ನು ಮೋದಿಜಿ ಸರ್ಕಾರ ನೀಡಿದೆ ಎಂದಿದ್ದಾರೆ.
ಯು.ಪಿ.ಎ. ಆಡಳಿತಾವಧಿಯಲ್ಲಿ 2009 ರಿಂದ 2014 ರವರೆಗೆ ಪ್ರತಿ ವರ್ಷ 113 ಕಿ.ಮೀ ಸರಾಸರಿಯಂತೆ 565 ಕಿ.ಮೀ ರೈಲ್ವೆ ಹಳಿ ನಿರ್ಮಾಣ ಮಾಡಿದರೆ, ಅದೇ ಮೋದಿಜಿ ಆಡಳಿತಾವಧಿಯಲ್ಲಿ 2014-2024 ರವರೆಗೆ ವರ್ಷಕ್ಕೆ ಸರಾಸರಿ 163 ಕಿ.ಮೀ ನಂತೆ ಒಟ್ಟು 1,633 ಕಿ.ಮೀ ರೈಲ್ವೆ ಹಳಿ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.