ಮನುಷ್ಯಜೀವಿಗೆ ಹೊಸತನದ ಆರಂಭ ಅತ್ಯಗತ್ಯವಾದುದು.ಬದುಕಿನ ಬಂಡಿ ಸಾಗುವಾಗ ಹಳೆಯ ಕಹಿಕೋಟಲೆಗಳನ್ನು ಪಕ್ಕಕ್ಕೆ ಸರಿಸಿ ಹೊಸದೊಂದು ಆಹ್ಲಾದಕರ ಘಳಿಗೆಗಾಗಿ ಕೆಲವು ಉದ್ದೇಶಗಳಿಂದ ನಾವೆಲ್ಲ ಕಾಯುತ್ತಿರುತ್ತೇವೆ. ಈ ಜಗದ ಜೀವನ ನಾಲ್ಕು ದಿನದ ಸಂತೆ ಎನಿಸಿದರೂ ಬಲು ಭಾರವಾದುದು.
ಕಷ್ಟ,ಸುಖ,ದುಃಖ, ನೋವು, ನಲಿವು, ಸೋಲು, ಗೆಲುವು ಹೀಗೆ ವಿವಿಧ ಪದಗಳಿಂದ ಬಣ್ಣಿಸಿಕೊಳ್ಳುವ ಬದುಕಿನ ಕ್ಷಣಗಳು ಯಾವಾಗ ಏನೆಂದು ನಿರೀಕ್ಷಿಸಲಾಗದಷ್ಟು ವಿಭಿನ್ನ ಮತ್ತು ವಿಶಿಷ್ಟವಾಗಿ ಗೋಚರಿಸುತ್ತವೆ.ಹಾಗಾಗಿ ಮನುಷ್ಯನಿಗೆ ತನ್ನ ಬದುಕಿನಲ್ಲಿ ಯಾವುದೇ ಸವಾಲುಗಳು ಎದುರಾದರೂ ಜಗ್ಗದೆ ಕುಗ್ಗದೆ ಹಿಗ್ಗದೆ ಸಮಚಿತ್ತವಾಗಿ ಬಾಳಬೇಕಾಗುತ್ತದೆ. ಹಾಗೆ ಬಾಳಿದಾಗಲೇ ಬದುಕಿಗೊಂದು ಅರ್ಥ ದೊರೆಯುತ್ತದೆ. ಇಂತಹ ಬದುಕಿನ ಅರ್ಥ ವಿವರಣೆ ನೀಡುವ ನಮ್ಮ ಸಂಸ್ಕೃತಿಯ ಬಹುದೊಡ್ಡ ಪ್ರತೀಕವೇ ಯುಗಾದಿ ಹಬ್ಬ. ಯುಗಾದಿ ಹಬ್ಬವನ್ನು ಭಾರತೀಯರಾದ ನಾವುಗಳು ಹೊಸವರ್ಷದ ಆರಂಭ ಎಂದು ಭಾವಿಸಿದ್ದೇವೆ.
ಈ ಭಾವನೆ ನಿಜಕ್ಕೂ ಅರ್ಥಗರ್ಭಿತ ಕ್ಯಾಲೆಂಡರ್ ಬದಲಿಸುವ ವರ್ಷವನ್ನು ಹೊಸ ವರ್ಷವೆಂದು ಜಗತ್ತು ನಂಬಿ ಆಚರಿಸಿದರೆ ನಾವುಗಳು ಯುಗಾದಿಯನ್ನು ಹೊಸ ವರ್ಷದ ಆರಂಭವೆಂದು ಪರಿಭಾವಿಸಿ ಆಚರಿಸುವುದು ವೈಜ್ಞಾನಿಕವಾಗಿ ವೈಚಾರಿಕವಾಗಿ ಹಾಗೂ ಪ್ರಾಕೃತಿಕವಾಗಿ ಅತ್ಯಂತ ಸೂಕ್ತವೆಂದು ಹೇಳಬಹುದಾಗಿದೆ. ಚೈತ್ರಮಾಸದ ವಸಂತ ಋತುವಿನಲ್ಲಿ ಬರುವ ಈ ಹಬ್ಬ ಹೊಸತನವನ್ನು ಹೊತ್ತು ತರುತ್ತದೆ.ಚಳಿಗಾಲದಲ್ಲಿ ಮರ ಗಿಡಗಳು ತಮ್ಮ ಎಲೆಗಳೆಂಬ ಹಳೆತನವನ್ನು ಕಳಚಿಕೊಂಡು ಬೋಳುಬೋಳಾಗಿರುತ್ತವೆ. ಯುಗಾದಿ ಹಬ್ಬ ಬರುವ ಮಾಸದಲ್ಲಿ ಈ ಮರಗಿಡಗಳು ಹೊಸ ಚಿಗುರು ತಳಿರುಗಳಿಂದ ಅಲಂಕೃತಗೊಂಡು ನವವಧುವಿನಂತೆ ಸಿಂಗಾರಗೊಂಡು ಪ್ರಕೃತಿಯ ಸೊಬಗನ್ನು ಉಂಟುಮಾಡುತ್ತವೆ. ಈ ಸೊಗಸಿನ ಅಂದವನ್ನು ಕಣ್ತುಂಬಿಕೊಳ್ಳುವುದೇ ಒಂದು ಸ್ವರ್ಗ.
ಇದೇ ಸಂದರ್ಭದಲ್ಲಿ ಆರೋಗ್ಯ ಸಮೃದ್ಧಿಯನ್ನು ಬಯಸಿ ಸರ್ವರು ಎಣ್ಣೆಸ್ನಾನ ಮಾಡಿ ಸಂಭ್ರಮಿಸುತ್ತಾರೆ.ಬೇವು ಬೆಲ್ಲ ಹಂಚಿ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಿ ಸಮಚಿತ್ತದಲ್ಲಿ ಬದುಕುವ ಸಂದೇಶವನ್ನು ಸಾರುತ್ತಾರೆ.ಬೇವು ಕಷ್ಟ ದುಃಖ ಹಾಗೂ ಬದುಕಿನ ಕಹಿ ಘಟನೆಯ ಸಂಕೇತವಾದರೆ,ಬೆಲ್ಲ ಸುಖ ನಲಿವು ಸಿಹಿಯ ಸಂಕೇತವೆನಿಸುತ್ತದೆ. ಬಾಳಿನಲ್ಲಿ ನಾವು ಸುಖ ಅಥವಾ ದುಃಖ ಒಂದನ್ನೆ ನಿರೀಕ್ಷೆ ಮಾಡಲಾಗದು. ಎರಡೂ ಸಹ ಸಮವಾಗಿ ಬರುವುದನ್ನು ನಿರೀಕ್ಷೆ ಮಾಡಿ ಬದುಕಿದಾಗಲೇ ಬದುಕು ಅರ್ಥಪೂರ್ಣವಾಗುತ್ತದೆ.
ಈ ಅರ್ಥಪೂರ್ಣ ಹೊಸವರ್ಷದ ಆರಂಭ ಎಲ್ಲಾ ಚಟುವಟಿಕೆಗಳ ಆರಂಭಕ್ಕೂ ಮುನ್ನುಡಿಯಾಗುತ್ತದೆ. ನಮ್ಮ ಅನ್ನದಾತ ರೈತರು ಮುಂಗಾರು ನಿರೀಕ್ಷೆಯಲ್ಲಿ ಸಮೃದ್ಧಿ ಬೆಳೆ ತೆಗೆಯಲು ಮಾಗಿ ಕೆಲಸಗಳನ್ನು ಆರಂಭಿಸುತ್ತಾರೆ. ಗೇಯುವುದರ ಮೂಲಕ, ಹರಗುವುದರ ಮೂಲಕ ಜಮೀನನ್ನು ಹದಗೊಳಿಸಿ ಮುಂಗಾರು ಮಳೆ ಬಿತ್ತನೆಗೆ ಸರ್ವ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಾರೆ.
ಇದು ಕೃಷಿ ಕ್ಷೇತ್ರದಲ್ಲಾದರೆ, ಶೈಕ್ಷಣಿಕ ಕ್ಷೇತ್ರದಲ್ಲಿ, ಪ್ರಸ್ತುತ ಶೈಕ್ಷಣಿಕ ವರ್ಷದ ಪರೀಕ್ಷೆಗಳು ಕೊನೆಗೊಂಡು ಮುಂಬರುವ ಶೈಕ್ಷಣಿಕ ವರ್ಷಕ್ಕೆ ಹೊಸ ತಯಾರಿ ನಡೆಯುತ್ತದೆ.ಎಲ್ಲಾ ಸಂಸ್ಥೆ, ಕಂಪನಿ, ಕಚೇರಿಗಳು ವಾರ್ಷಿಕ ಆಯವ್ಯಯಗಳ ಲೆಕ್ಕಾಚಾರವನ್ನು ಕೊನೆಗೊಳಿಸಿ ಹೊಸ ಲೆಕ್ಕಾಚಾರ ಆರಂಭಿಸುತ್ತವೆ.ಹೀಗೆ ಹೊಸತನವನ್ನು ಹೊತ್ತು ತರುವ ಯುಗಾದಿ ಕೇವಲ ಒಂದು ಕ್ಷೇತ್ರಕ್ಕಷ್ಟೇ ಮೀಸಲಾಗಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಹಳೆಯದನ್ನು ಮೂಟೆಕಟ್ಟಿ ಹೊಸದನ್ನು ಪ್ರಾರಂಭಿಸುವಂತೆ ಪ್ರೇರಕವಾಗಿದೆ.
ಯುಗಾದಿ ಸಂಸ್ಕೃತಿ,ಸಂಸ್ಕಾರಗಳ ಪ್ರತೀಕವೂ ಹೌದು. ಚಂದ್ರಮನ ದರ್ಶನ ಪಡೆದ ನಮ್ಮ ಜನಗಳು ಚಂದ್ರ ದರ್ಶನವಾಯಿತೇ? ಎಂದು ಕೇಳಿ ಹಿರಿಯರ ಆಶೀರ್ವಾದ ಪಡೆಯುತ್ತಾರೆ.ಕಿರಿಯರಿಗೆ ಹಿರಿಯರು ಮನದುಂಬಿ ಆಶೀರ್ವದಿಸುತ್ತಾರೆ.ರುಚಿರುಚಿಯಾದ ಭಕ್ಷ್ಯ ತಯಾರಿಸಿ, ಸವಿದು ಸಂತೋಷಿಸುತ್ತಾರೆ. ಉಯ್ಯಾಲೆಯಾಡಿ ಉಬ್ಬುತ್ತಾರೆ.
ಒಟ್ಟಾರೆ ಯುಗಾದಿ ಹಬ್ಬ ಹೊಸ ವರ್ಷದ ಆರಂಭದ ಆಚರಣೆ ಎಂಬುದಕ್ಕೆ ಪುಷ್ಟಿನೀಡುವ ಎಷ್ಟೆಲ್ಲಾ ಅಂಶಗಳಿವೆ. ಹಾಗಾಗಿ ಇದು ಆನಂದ ಪುಳಕಿತವಾದ ಸವಿಘಳಿಗೆ ಅಲ್ಲವೇ ? ಸರ್ವರಿಗೂ ಈ ಯುಗಾದಿ ಸ್ವಲ್ಪ ಕಹಿ, ಹೆಚ್ಚೆಚ್ಚು ಸಿಹಿಯನ್ನು ಹೊತ್ತು ತರಲಿ, ಎಲ್ಲರ ಬದುಕಿನಲ್ಲಿ ಅರ್ಥಗರ್ಭಿತ ಹೊಸತನ ಆವಿರ್ಭವಿಸಲಿ ಎಂದು ಹಾರೈಸುತ್ತೇನೆ.
ಡಾ.ಎಸ್.ಎಚ್ ಶಫಿಉಲ್ಲ(ಕುಟೀಶ)
ಸಾಹಿತಿಗಳು ಹಾಗೂ ಉಪನ್ಯಾಸಕರು ಹಿರಿಯೂರು ; 88674 35662