ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಗೆ ಆಸ್ಪತ್ರೆ ನಿರ್ಮಿಸಿಕೊಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಹಮತಿಯೂ ಇದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಆರ್ಥಿಕ ಇಲಾಖೆ ಯಾವುದೇ ಪ್ರಸ್ತಾವವನ್ನು ಅಳೆದು ತೂಗಿ ನಿರ್ಧಾರ ಮಾಡುತ್ತದೆ. ಇದರ ಹೊರತಾಗಿಯೂ ಜನರ ಕೂಗಿಗೆ, ಬೇಡಿಕೆಗೆ ಅನುಗುಣವಾಗಿ ಮುಖ್ಯಮಂತ್ರಿಗಳು ಸಕಾರಾತ್ಮಕವಾದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆರ್ಥಿಕ ಇಲಾಖೆಯಿಂದ ಈ *ಪ್ರಸ್ತಾವ ಮರಳಿದ ಬಳಿಕ ಅದನ್ನು ಮುಖ್ಯಮಂತ್ರಿಗಳಿಗೆ ಕಳುಹಿಸುತ್ತೇನೆ* ಎಂದು ಸ್ಪಷ್ಟಪಡಿಸಿದರು.
ಇಂದು ರಕ್ತದಾನ ಮಹೋತ್ಸವದ ಬಗ್ಗೆ ಮಾತನಾಡಿ, ದೇಶದ ಶೇ.1 ರಷ್ಟು ಜನರು ರಕ್ತದಾನ ಮಾಡಿದರೂ ರಕ್ತದ ಬೇಡಿಕೆಯನ್ನು ಈಡೇರಿಸಬಹುದು ಎಂದು ಹೇಳಿದರು.
ಅಖಿಲ ಭಾರತೀಯ ತೇರಾಪಂಥ್ ಯುವಕ ಪರಿಷದ್ ವತಿಯಿಂದ ವಿಧಾನಸೌಧ ಮುಂಭಾಗ ನಡೆದ ರಕ್ತದಾನ ಅಭಿಯಾನದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ತೇರಾಪಂಥ್ ಪರಿಷದ್ ಇಡೀ ದೇಶದಲ್ಲಿ 5 ಸಾವಿರ ಕಡೆ ಹಾಗೂ ಬೆಂಗಳೂರಿನಲ್ಲಿ 250 ಕಡೆ ಏಕಕಾಲಕ್ಕೆ ರಕ್ತದಾನ ಶಿಬಿರ ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಪ್ರಯುಕ್ತ ಹಮ್ಮಿಕೊಂಡ ಈ ಕಾರ್ಯ ಅರ್ಥಪೂರ್ಣವಾದುದು. ರಕ್ತದಾನದ ಮೂಲಕ ಯುವಜನರು ಸಾರ್ಥಕತೆ ಮೆರೆಯುವ ಅವಕಾಶ ಇಲ್ಲಿದೆ. ಯಾವುದೇ ವಸ್ತುಗಳನ್ನು ನಾವು ದಾನ ಮಾಡಬಹುದು. ಆದರೆ ರಕ್ತದಾನ ಮಹಾಶ್ರೇಷ್ಠವಾಗಿದೆ ಎಂದರು.
ರಕ್ತಕ್ಕೆ ಪರ್ಯಾಯವಾದುದು ಯಾವುದೂ ಇಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ.1 ರಷ್ಟು ಜನರು ರಕ್ತದಾನ ಮಾಡಿದರೂ ಬೇಡಿಕೆಯನ್ನು ಈಡೇರಿಸಬಹುದು. ರಾಜ್ಯದಲ್ಲಿ ಕಳೆದ ವರ್ಷ 6.80 ಲಕ್ಷ ಯುನಿಟ್ ರಕ್ತದ ಬೇಡಿಕೆ ಇತ್ತು. ರಾಜ್ಯದ ಜನರಲ್ಲಿ ಶೇ.1 ರಷ್ಟು ಜನರು ರಕ್ತದಾನ ಮಾಡಿದ್ದರೂ ಈ ಬೇಡಿಕೆ ಈಡೇರುತ್ತಿತ್ತು. ದೇಶದಲ್ಲಿ 12.80 ಲಕ್ಷ ಯುನಿಟ್ ಬೇಕಿದೆ. ಶೇ.1 ರಷ್ಟು ಜನರು ವರ್ಷಕ್ಕೆ ಒಂದು ಬಾರಿ ರಕ್ತದಾನ ಮಾಡಿದರೆ ರಕ್ತದಾನ ಮಾಡುವವರ ಆರೋಗ್ಯವೂ ಉತ್ತಮವಾಗುತ್ತದೆ. ಬೇರೆಯವರ ಜೀವವೂ ಉಳಿಯುತ್ತದೆ. ಇಂದಿನಿಂದ ಆರಂಭವಾಗಿ ಗಾಂಧಿ ಜಯಂತಿವರೆಗೂ ವಿಶೇಷ ಆರೋಗ್ಯ ಅಭಿಯಾನ ನಡೆಯುತ್ತಿದ್ದು, ಇದರಲ್ಲಿ ರಕ್ತದಾನ ಕಾರ್ಯವೂ ನಡೆಯಲಿದೆ ಎಂದರು.