Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬೇರೆಬೇರೆ ಕಾರಣಗಳಿಂದ ಬರುವ ಹಲ್ಲು ನೋವು | ಸಮಸ್ಯೆಗಳು ಮತ್ತು ಚಿಕಿತ್ಸೆ ಕುರಿತು ಡಾ ಕೆ. ವಿ. ಸಂತೋಷ್‌ ವಿಶೇಷ ಲೇಖನ

Facebook
Twitter
Telegram
WhatsApp

ದೇಹದ ಎಲ್ಲಾ ಅಂಗಗಳಂತೆ ಹಲ್ಲು ಕೂಡ ಒಂದು ಪ್ರಮುಖ ಅಂಗವಾಗಿದ್ದು,ಇದರಲ್ಲಿ ಬರುವ ನೋವು ತೀವ್ರತರವಾಗಿದ್ದು ರೋಗಿಯನ್ನು ಅತೀವವಾಗಿ ಬಾಧಿಸುತ್ತದೆ. ಈ ನೋವನ್ನು ತಡೆದುಕೊಳ್ಳಲು ಅಸಾಧ್ಯವಾಗಿರುತ್ತದೆ,ಕಾರಣ ಇದರಲ್ಲಿರುವ ಅತಿ ಸೂಕ್ಷ್ಮ ರಕ್ತನಾಳಗಳು ಹಾಗೂ ನರವ್ಯೂಹ.

ಹಲ್ಲು ನೋವಿಗೆ ಬಹಳಷ್ಟು ಬಾರಿ ಹಲ್ಲು ಪ್ರಮುಖ ಕಾರಣವಾಗಿರುತ್ತದೆ, ಅದರಲ್ಲೂ ಹಲ್ಲು ಹುಳುಕು, ಹಲ್ಲು ಅಲ್ಲಾಡುವುದು,ಹಲ್ಲಿನ ಸೋಂಕು..ಇವು ಪ್ರಮುಖವಾಗಿ ಹಲ್ಲಿನ ನೋವಿಗೆ ಕಾರಣವಾಗಿರುತ್ತದೆ.

ಆದರೆ ಶೇಕಡ 50-60 ರಷ್ಟು ಹಲ್ಲು ನೋವುಗಳಿಗೆ ಹಲ್ಲು ಕಾರಣವಾಗಿರುವುದೇ ಇಲ್ಲ ಅಂದರೆ ಹಲ್ಲಲ್ಲಿ ಯಾವುದೇ ಮೂಲ ಇರುವುದಿಲ್ಲ. ಬದಲಿಗೆ ಹಲ್ಲು ಅತ್ಯಂತ ಆರೋಗ್ಯಕರ ಸ್ಥಿತಿಯಲ್ಲಿರುತ್ತದೆ. ಆದರೂ ಹಲ್ಲು ನೋವು ಸತತವಾಗಿ ರೋಗಿಗೆ ಬಾಧಿಸುತ್ತದೆ. ಆದರೆ ರೋಗಿ ಮಾತ್ರ ದಂತ ವೈದ್ಯರಲ್ಲಿ ತನಗೆ ಹಲ್ಲು ನೋವು ಇದೆ ಎಂದೇ ಬಂದು ತೋರಿಸಿಕೊಳ್ಳುತ್ತಾನೆ.

ಇದನ್ನು ಗುರುತಿಸುವುದು ಹಾಗೂ ರೋಗ ನಿಧಾನ (Diagnosis ) ಅತ್ಯಂತ ಕ್ಲಿಷ್ಟಕರ ಹಾಗೂ ಸವಾಲಿನದ್ದಾಗಿರುತ್ತದೆ. ಏಕೆಂದರೆ ಹಲ್ಲು ನೋವಿಗೆ ಅಲ್ಲಿ ಯಾವುದೇ ಹಲ್ಲಿನ ಕಾರಣ ಇರುವುದಿಲ್ಲ. ಬದಲಿಗೆ ಬೇರೆ ಅಂಗಾಂಗಗಳಿಂದ ನೋವಿನ ತೀವ್ರತೆಯೂ ಹಲ್ಲಿಗೆ ಹಬ್ಬಿ, ಹಲ್ಲಲ್ಲಿ ನೋವು ಇರುವಂತೆ ಭಾಸವಾಗುತ್ತದೆ ಹಾಗೂ ರೋಗಿಯು ತನಗೆ ಹಲ್ಲು ನೋವು ಇದೆ ಎಂದೇ ಭ್ರಮಿಸುತ್ತಾನೆ. ದಂತ ಸಮಸ್ಯೆಗಳಂತೆ ತೋರಿ ಬರುವ ಅನೇಕ ದೈಹಿಕ ತೊಂದರೆಗಳು ದಂತ ವೈದ್ಯರನ್ನು ಹಾಗೂ ರೋಗಿಗಳನ್ನು ಕೆಲವೊಮ್ಮೆ ದಾರಿ ತಪ್ಪಿಸುತ್ತದೆ.ಆದರೆ ನೈಜ ಪರೀಕ್ಷೆ,ಸೂಕ್ಷ್ಮ ರೋಗ ಪತ್ತೆ,ರೋಗ ಲಕ್ಷಣಗಳು, ಅನುಭವಗಳಿಂದ.. ದಂತ ಸಮಸ್ಯೆ ಯಾವುದು?
ಇತರೆ ದೈಹಿಕ ತೊಂದರೆಗಳಿಂದ ಬಂದಿರುವ/ ಬಂದಿರಬಹುದಾದ ಸಮಸ್ಯೆ ಯಾವುದೆಂದು ಪತ್ತೆ ಮಾಡಬಹುದು.

ಪ್ರತಿ ದಂತ ಸಮಸ್ಯೆಯನ್ನು ಸೂಕ್ಷ್ಮವಾಗಿ ವಿಮರ್ಶಿಸಿ, ವಿಶ್ಲೇಷಿಸಿ ನಂತರವೇ ನಾವು ಚಿಕಿತ್ಸೆಗೆ ಮುಂದಾಗಬೇಕು.

ದಂತ ಸಮಸ್ಯೆಗಳಂತೆ ತೋರಿ ಬರುವ ಇನ್ನಿತರೆ ದೈಹಿಕ ಸಮಸ್ಯೆಗಳು:

1.ಹರ್ಪಿಸ್ ಸೋಂಕು (ಮುಖದ ಸರ್ಪ ಸುತ್ತು)
ಮುಖದ ಒಂದು ಭಾಗದಲ್ಲಿ ತೀವ್ರತರವಾಗಿ ಹಬ್ಬುವ ವೈರಾಣು ಹರ್ಪಿಸ್ ಸೋಂಕು ಮುಖದ ಒಂದು ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.
ಇದರಲ್ಲಿ ರೋಗಿಯು ದಂತ ವೈದ್ಯರಲ್ಲಿ ತನಗೆ ಹಲ್ಲುನೋವು, ವಸಡು ನೋವು, ದವಡೆಯಲ್ಲಿ ನೋವು ಇದೆ ಎಂದೇ ಬರುತ್ತಾರೆ. ಪರೀಕ್ಷಿಸಿದಾಗ ಅವರಿಗೆ ಹಲ್ಲುಗಳಲ್ಲಿ ನೋವು ಇರುತ್ತದೆ. ಆದರೆ ವಾಸ್ತವವಾಗಿ ಅವರಲ್ಲಿ ಯಾವುದೇ ಹಲ್ಲಿನ ಕಾರಣ ಇರುವುದೇ ಇಲ್ಲ, ಬದಲಾಗಿ ಅದರಡಿಯ ನರಗಳಿಗೆ ಹರ್ಪಿಸ್ ಸೋಂಕು ತಗುಲಿ ಆ ನರವು ಎಲ್ಲೆಲ್ಲಿ ಹರಡಿರುತ್ತದೆಯೋ ಅಲ್ಲೆಲ್ಲವೂ ಕೆಂಪು ದದ್ದುಗಳು,ಗುಳ್ಳೆಗಳು ಎದ್ದಿರುತ್ತವೆ. ಇದಕ್ಕೆ ವೈರಾಣು ವಿರೋಧಿ ಔಷಧಿಯ ಅವಶ್ಯಕತೆ ಇರುತ್ತದೆ.( Antiviral) ಬದಲಿಗೆ ಇಲ್ಲಿ ಯಾವುದೇ ಆಂಟಿಬಯೋಟಿಕ್ ಗಳು, ನೋವು ನಿವಾರಕಗಳು ಕೆಲಸ ಮಾಡುವುದಿಲ್ಲ. ಮತ್ತು ಈ ಸೋಂಕು ಏಳರಿಂದ ಹದಿನೈದು ದಿನಗಳ ಒಳಗೆ ತಾನೇ ತಾನಾಗಿ ಸರಿಯಾಗುತ್ತದೆ. ಹಾಗೆಂದು ಇದಕ್ಕೆ ಯಾವುದೇ ಹಲ್ಲಿನ ಚಿಕಿತ್ಸೆ ಅವಶ್ಯಕತೆ ಇರುವುದಿಲ್ಲ.
ಇದರಲ್ಲಿ ಸಂಪೂರ್ಣವಾಗಿ ಹಲ್ಲುಗಳು ಆರೋಗ್ಯಕರ ಸ್ಥಿತಿಯಲ್ಲಿ ಇರುತ್ತವೆ.

2. ಮೂರನೇ ದವಡೆ ಹಲ್ಲು ಮೂಡುವಾಗ:
ಸಾಮಾನ್ಯವಾಗಿ 18ರಿಂದ 25 ವರ್ಷಗಳ ತನಕ ಈ ಮೂರನೇ ದವಡೆ ಹಲ್ಲು ಬುದ್ಧಿಹಲ್ಲು ಮೂಡುತ್ತದೆ. ಈ ಸಮಯದಲ್ಲಿ ದವಡೆಗಳು ಈಗಾಗಲೇ ಪರಿಪೂರ್ಣತೆ ಹೊಂದಿ ವ್ಯಕ್ತಿಗೆ ದೈಹಿಕ    ಬೆಳವಣಿಗೆಯು ನಿಂತಿರುತ್ತದೆ. ಮೂರನೇ ದವಡೆ ಹಲ್ಲು ಬರುವಾಗ ಮೂಳೆಗಳನ್ನು ಭೇದಿಸಿ ಹೊರಬರಬೇಕಾಗುತ್ತದೆ.

ಇದರಿಂದ ಸಾಕಷ್ಟು ನೋವು, ದವಡೆಗಳಲ್ಲಿ ಯಾತನೆ ಇದ್ದೇ ಇರುತ್ತದೆ. ಆ ಹಲ್ಲು ಮೂಡುವಾಗ ಬೀಳುವ ಒತ್ತಡವು ಅಕ್ಕಪಕ್ಕದ ಹಲ್ಲುಗಳ ಮೇಲೆ ಬೀಳುತ್ತಿರುತ್ತದೆ.ಇದರಿಂದ ಅಕ್ಕಪಕ್ಕದ ಹಲ್ಲುಗಳಲ್ಲಿ ತೀವ್ರವಾದ ನೋವು ಇರುತ್ತದೆ. ಆಗ ಕೂಡ ರೋಗಿಯು ಆರೋಗ್ಯಕರ ಹಲ್ಲುಗಳನ್ನೇ ತನಗೆ ನೋವಿನ ಮೂಲ ಎಂದು ಹೇಳುತ್ತಾನೆ.
ಇದು ದಿನಕಳೆದಂತೆ ಸರಿಯಾಗುತ್ತದೆ ಮತ್ತು ವೈದ್ಯರ ಚಿಕಿತ್ಸೆಯ ಅವಶ್ಯಕತೆ ಕೆಲವೊಂದು ಬಾರಿ ಬೀಳುತ್ತದೆ.

3.ಹಲ್ಲು ಕಡಿಯುವುದರಿಂದ ಬರುವ ಹಲ್ಲು ನೋವು
(Bruxism)
ಹಲ್ಲು ಮೂಡುವಾಗ ಅದರ ಅಕ್ಕಪಕ್ಕದ ಮಾಂಸಖಂಡಗಳ ಮೇಲೆ ತೀವ್ರತರವಾದ ಒತ್ತಡವು ಬೀಳುತ್ತದೆ. ಇದರಿಂದ ಮಾಂಸಖಂಡಗಳು ಹೆಚ್ಚುವರಿಯಾಗಿ ಅನಿಯಂತ್ರಿತವಾಗಿ ಕೆಲಸ ಮಾಡಲು ಶುರು ಮಾಡಿಬಿಡುತ್ತವೆ. ಇದು ವ್ಯಕ್ತಿಯ ಗಮನಕ್ಕೆ ಬರುವುದೇ ಇಲ್ಲ.ಅದರಲ್ಲೂ ಮಲಗಿದ ಸ್ಥಿತಿಯಲ್ಲಿ ಈ ಮಾಂಸಖಂಡಗಳು ಕೆಲಸ ಶುರು ಮಾಡಿ ಹಲ್ಲುಗಳನ್ನು ಪರಸ್ಪರ ಉಜ್ಜುವಂತೆ ಮಾಡಿ ದವಡೆಗಳಲ್ಲಿ ತೀವ್ರವಾದ ನೋವು ತರುತ್ತದೆ ಮತ್ತು ಬೆಳಗಿನ ಎಚ್ಚರ ಸ್ಥಿತಿಯಲ್ಲಿ ಹಲ್ಲುಗಳಲ್ಲಿ ನೋವು ಕಾಣಿಸಿಕೊಳ್ಳುವಂತೆ ಮಾಡಿರುತ್ತವೆ.
ಈ ಸ್ಥಿತಿಯಲ್ಲೂ ಕೂಡ ಆರೋಗ್ಯಕರ ಹಲ್ಲುಗಳಲ್ಲಿ ನೋವು ಬರುತ್ತದೆ. ಇದಕ್ಕೆ ದಂತ ವೈದ್ಯರಿಂದ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ.

4.ತೀವ್ರ ನೆಗಡಿಯ ಸ್ಥಿತಿಯಲ್ಲಿ ಬರುವ ಹಲ್ಲು ನೋವು
ಇದು ಸರ್ವೇಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ.
ನಮಗೆಲ್ಲರಿಗೂ ತಿಳಿದಂತೆ ಮೂಗು ಹಾಗೂ ಕಣ್ಣಿನ ಕೆಳಭಾಗದಲ್ಲಿ ಇರುವ ಮ್ಯಾಕ್ಸಿಲರಿ ಸೈನಸ್ (maxillary sinus ) ಪರಸ್ಪರ ಒಂದು ಗಾಳಿ ಕೊಳವೆಯ ಮೂಲಕ ಸಂಪರ್ಕಿಸಿಕೊಂಡಿರುತ್ತವೆ.

ವ್ಯಕ್ತಿಗೆ ತೀವ್ರ ನೆಗಡಿಯಾದಾಗ (5-6 ದಿನ ) ಮೂಗಿನ ಒಳಭಾಗದ ಸಿಂಬಳ ಮ್ಯಾಕ್ಸಿಲರಿ ಸೈನಸ್ ಭಾಗಕ್ಕೆ ಆ ಕೊಳವೆಯ ಮೂಲಕ ತಲುಪಿ ಸೋಂಕು ಉಂಟುಮಾಡುತ್ತದೆ.(sinusitis )ಆಗ ಅದರ ಒಳಗಿನ ಪದರವು ಹಿಗ್ಗಿ ಬಾಯಿಯ ಮೇಲ್ಬಾಗದ ದವಡೆ ಹಲ್ಲುಗಳ ಮೇಲೆ ಸತತ ಒತ್ತಡ ತರುತ್ತದೆ. ಇದರಿಂದ ರೋಗಿಗೆ ತೀವ್ರವಾದ ಹಲ್ಲು ನೋವು, ತಲೆಭಾರ ತರುತ್ತದೆ. ರೋಗಿ ಕೂಡ ತನಗೆ ಹಲ್ಲು ನೋವು ಇದೆ ಎಂದು ಭ್ರಮಿಸಿ ದಂತ ವೈದ್ಯರಲ್ಲಿ ಬರುತ್ತಾನೆ.
ಸೂಕ್ಷ್ಮ ಪರೀಕ್ಷೆ ಹಾಗೂ ರೋಗದ ಹಿನ್ನೆಲೆ ತಿಳಿದು ಇದಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ. ಹೊರತು ಹಲ್ಲು ನೋವಿಗೆ ಯಾವುದೇ ಚಿಕಿತ್ಸೆಯ ಅವಶ್ಯಕತೆ ಇರುವುದಿಲ್ಲ.

5. ನ್ಯೂರಾಲ್ಜಿಯ ಸಮಸ್ಯೆ
ಇದು ಸರ್ವೇ ಸಾಮಾನ್ಯವಾಗಿ ವೈದ್ಯರನ್ನು ಹಾಗೂ ರೋಗಿಯನ್ನು ದಾರಿ ತಪ್ಪಿಸುವ ಒಂದು ಅನಾರೋಗ್ಯಕರ ಸ್ಥಿತಿಯಾಗಿದೆ.

ಇದರಲ್ಲಿ ತೀವ್ರತರವಾದ ಹಲ್ಲಿನ ನೋವು ಭಾದಿಸುತ್ತದೆ. ಆದರೆ ಅದಕ್ಕೆ ಮೂಲ ಹಲ್ಲು ಆಗಿರುವುದೇ ಇಲ್ಲ,ಬದಲಾಗಿ ಅದರ ಅಡಿ ಇರುವ ಐದನೇ ಬುರುಡೆ ನರ ( trigeminal nerve )ದ ನ್ಯೂರಾಲ್ಜಿಯಾ ಸಮಸ್ಯೆ ಆಗಿರುತ್ತದೆ.
ಇದು ಸಾಮಾನ್ಯವಾಗಿ 50 ವರ್ಷ ದಾಟಿದ ವಯಸ್ಸಿನವರಲ್ಲಿ ಕಂಡುಬರುತ್ತದೆ. ಕೆಲವರಲ್ಲಿ ಮಾತ್ರ ಸಮಸ್ಯೆ ಇರುವ ಹಲ್ಲುಗಳಿದ್ದು, ಹಲ್ಲುಗಳೇ ನೋವಿನ ಮೂಲ ಎಂದು ತಿಳಿದು ಅದನ್ನು ತೆಗೆಸಿಬಿಡುತ್ತಾರೆ,ಇಲ್ಲವೇ ಅದಕ್ಕೆ ರೂಟ್ ಕ್ಯಾನಲ್ ಚಿಕಿತ್ಸೆ ಮಾಡಿಸುತ್ತಾರೆ. ಆದರೆ ಯಾವ ಚಿಕಿತ್ಸೆಗಳು ಫಲಕಾರಿಯಾಗುವುದಿಲ್ಲ, ನೋವು ಕೂಡ ಕಡಿಮೆಯಾಗುವುದಿಲ್ಲ. ಕೆಲವು ರೋಗಿಗಳ ಬಾಯಿಯಲ್ಲಿ ಒಂದು ಹಲ್ಲು ಕೂಡ ಇರುವುದಿಲ್ಲ. ಆದರೂ ಹಲ್ಲು ನೋವು ಇದೆ ಎಂದೇ ಹೇಳುತ್ತಾರೆ.

ಆದ್ದರಿಂದ ಒಂದು ವಿಚಾರ ನಾವು ತಿಳಿದುಕೊಳ್ಳಲೇಬೇಕೆಂದರೆ ಎಲ್ಲಾ ಹಲ್ಲಿನ ನೋವುಗಳಿಗೂ ಹಲ್ಲುಗಳೇ ಕಾರಣವಾಗಿರಲಾರದು, ಬದಲಾಗಿ ಹಲ್ಲುಗಳನ್ನು ಹೊರತುಪಡಿಸಿ ಇನ್ನಿತರೆ ಕಾರಣಗಳಿಂದಲೂ ಕೂಡ ಹಲ್ಲು ನೋವು ಬಂದಿರುತ್ತದೆ.

6.ಕಿವಿ ನೋವು :
ದೀರ್ಘಕಾಲಿನವಾಗಿ ಕಾಡುವ ಕಿವಿ ನೋವು ಅಥವಾ ಕಿವಿಯ ಸೋಂಕುಗಳು ಕೂಡ ಕೆಳದವಡೆಯ ಹಲ್ಲಿನ ನೋವಿನಂತೆ ಗೋಚರಿಸುತ್ತವೆ. ಕಿವಿ ಭಾಗಕ್ಕೆ ಸಂಪರ್ಕಿಸುವ ಮುಖದ ನರವು(Facial nerve ) ಎರಡು ಜಾಗಕ್ಕೂ ಸಂಪರ್ಕಿಸುವ ಕಾರಣ ಕಿವಿಯ ನೋವುಗಳು ಕೆಲವೊಮ್ಮೆ ಹಲ್ಲಿನ ನೋವುಗಳಂತೆ ಭಾಸವಾಗುತ್ತದೆ. ಜೊತೆಗೆ ತೀವ್ರ ಹಲ್ಲಿನ ನೋವುಗಳು ಕೂಡ ಕಿವಿಗಳಲ್ಲಿ ನೋವನ್ನು ಬರಿಸುತ್ತದೆ.

7. ತೀವ್ರತರ ಮೈಗ್ರೇನ್ ತಲೆನೋವು
ಮೈಗ್ರೇನ್ ತಲೆನೋವು ಇದ್ದಾಗ ತಲೆನೋವು,ಸುಸ್ತು, ಆಯಾಸ, ಗಾಬರಿ, ವಾಂತಿ ಜೊತೆಗೆ ತೀವ್ರತರವಾದ ಹಲ್ಲು ನೋವು ಕೂಡ ಬರಬಹುದು.
ಆದರೆ ಇದರಲ್ಲಿ ಆರೋಗ್ಯಕರ ಹಲ್ಲುಗಳು ಇರುತ್ತವೆ. ಆದ್ದರಿಂದ ಮೂಲವನ್ನು ತಿಳಿದು ಚಿಕಿತ್ಸೆ ನೀಡಬೇಕಾಗುತ್ತದೆ.

8.ಹೃದಯದ ಕಾರಣಕ್ಕೆ ಬರುವ ಹಲ್ಲು ನೋವು
ತೀವ್ರ ಹೃದಯದ ನೋವು, ಹೃದಯಘಾತ ಆದಾಗ ವಾಂತಿ ತಲೆಸುತ್ತು,ಎಡಭಾಗದ ದೇಹದಲ್ಲಿ ನೋವು,ಬೆನ್ನುನೋವು ಬರುತ್ತದೆ. ಜೊತೆಗೆ ಕೆಳದವಡೆಯ ಭಾಗಕ್ಕೂ ನೋವಿನ ತೀವ್ರತೆ ಹಬ್ಬಿ, ಕೆಳದವಡೆಯ ಹಲ್ಲುಗಳಲ್ಲಿ ತೀವ್ರವಾದ ನೋವು ತರುತ್ತದೆ. ಹೃದಯದ ಸಮಸ್ಯೆಗೆ ಚಿಕಿತ್ಸೆ ಪಡೆದು ಕೊಂಡಾಗ ಈ ಸಮಸ್ಯೆ ದೂರವಾಗುತ್ತದೆ.

9. ಮೆದುಳುಗಡ್ಡೆ
Brain tumour ಎಂದು ಸಾಮಾನ್ಯವಾಗಿ ಕರೆಯುವ ಈ ರೋಗದಲ್ಲಿ ನೋವಿನ ಕಂಪನಗಳು ಹಲ್ಲುಗಳಿಗೆ ತಲುಪಿ ತೀವ್ರವಾದ ಹಲ್ಲು ನೋವು ತರಬಹುದು. ಸೂಕ್ತ ಪರೀಕ್ಷೆಗಳು ಮಾತ್ರ ಇದನ್ನು ಪತ್ತೆ ಮಾಡಬಲ್ಲವು.

10.TMJ ಕೆಳದವಡೆಯ ಕೀಲುಗಳ ಸಮಸ್ಯೆ
ಕೆಳದವಡೆಯು ಮೇಲ್ಭಾಗದ ಬುರುಡೆಗೆ ಸೇರುವ TM joint ಕೀಲುಗಳಲ್ಲಿ ಹಲ್ಲು ಮೂಡುವ ಸಮಯದಲ್ಲಿ ಅಥವಾ ಹಲ್ಲು ಕಡಿಯುವ ಅಭ್ಯಾಸದ ಸಮಯದಲ್ಲಿ ಕೆಲವೊಮ್ಮೆ ನೋವುಗಳು ಉಂಟಾದಾಗ ಆ ನೋವುಗಳು ದವಡೆಯ ಕೆಳಭಾಗದ ಹಲ್ಲುಗಳಿಗೆ ತಲುಪಿ ತೀವ್ರ ನೋವನ್ನು ತರಬಹುದು. ಈ ಸ್ಥಿತಿಯಲ್ಲೂ ಕೂಡ ಹಲ್ಲುಗಳು ಆರೋಗ್ಯಕರ ಸ್ಥಿತಿಯಲ್ಲಿ ಇರುತ್ತವೆ.

ಮೇಲೆ ತಿಳಿಸಿದ ಎಲ್ಲಾ ಸಮಸ್ಯೆಗಳನ್ನು ಪ್ರತ್ಯೇಕವಾಗಿ ವೈದ್ಯರ ಶಿಫಾರಸ್ಸಿನ ಮೇಲೆ ಪರೀಕ್ಷೆ ಮಾಡಿಸಿಕೊಂಡು ನಂತರವೇ ಹಲ್ಲುಗಳಿಗೆ ಚಿಕಿತ್ಸೆ ಪಡೆಯಬೇಕೇ,ಬೇಡವೇ ಎಂಬುದನ್ನು ನಿರ್ಧಾರ ಮಾಡಬೇಕಾಗುತ್ತದೆ.

ಒಮ್ಮೆಲೇ ತಮಗೆ ಹಲ್ಲಿನ ನೋವು ಇದೆ, ಅದಕ್ಕೆ ಕಾರಣ ಹಲ್ಲುಗಳೇ ಎಂದು ಸ್ವಯಂ ನಿರ್ಧಾರ ಮಾಡಿಕೊಂಡು ಎಂದಿಗೂ ಹಲ್ಲಿನ ಚಿಕಿತ್ಸೆಗೆ ಒಳಗಾಗಬಾರದು. ಸೂಕ್ತ ಪರೀಕ್ಷೆ,ರೋಗ ನಿದಾನ ಹಾಗೂ ರೋಗ ಲಕ್ಷಣಗಳನ್ನು ನೋಡಿಕೊಂಡು ನಂತರವೇ ಚಿಕಿತ್ಸೆ ಪಡೆಯಬೇಕಾಗುತ್ತದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಖುಷಿಯಿಂದ ಕ್ಷೇತ್ರದ ಜನರ ಸೇವೆ ಸಲ್ಲಿಸುತ್ತೇನೆ : ಗೋವಿಂದ ಕಾರಜೋಳ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 27 ; ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳಾಗಿದ್ದರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಇಲ್ಲಿನ ಜನ ಮುಗ್ದರು ಅಮಾಯಕರು, ಕುಡಿಯುವ ನೀರಿಗೂ ಸಮಸ್ಯೆಯಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ.

ಈ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ : ಬಿ.ಎನ್. ಚಂದ್ರಪ್ಪ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 27  : ಕ್ಷೇತ್ರದ ಹದಿನೆಂಟುವರೆ ಲಕ್ಷ ಮತದಾರರು ಶುಕ್ರವಾರ ನಡೆದ ಚುನಾವಣೆಯಲ್ಲಿ ನನ್ನ ಭವಿಷ್ಯ ನಿರ್ಣಯಿಸುತ್ತಾರೆ.

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು

error: Content is protected !!