ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜೂ.30) : ಪಾಶ್ವಿಮಾತ್ಯ ಸಂಸ್ಕøತಿ ಅನುಕರಣೆಯಿಂದ ಯುವ ಶಕ್ತಿ ಹೊರಬರಬೇಕು ಎಂದು ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರೇಮ ಪಲ್ಲವಿ ಸಿ.ಬಿ. ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾನಿಲಯ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸ್ನೇಹ ಸಂಭ್ರಮವನ್ನು ತ.ರಾ.ಸು.ರಂಗಮಂದಿರದಲ್ಲಿ ಶುಕ್ರವಾರ ಉದ್ಗಾಟಿಸಿ ಮಾತನಾಡಿದರು.
ದೇಶ ಸಮಾಜದ ವ್ಯವಸ್ಥೆಯನ್ನು ಬದಲಾಯಿಸುವ ಶಕ್ತಿ ಯುವ ಜನಾಂಗಕ್ಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಯಾವ ದಿಕ್ಕಿನತ್ತ ಸಾಗುತ್ತಿದ್ದಾರೆನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ತಂದೆ-ತಾಯಿ, ಗುರು-ಹಿರಿಯರು ಇಲ್ಲ ಸಮಾಜದ ತಪ್ಪೇ ಎನ್ನುವುದು ಗೊತ್ತಾಗುತ್ತಿಲ್ಲ. ಮಾನವೀಯತೆ ಮೆರೆಯುವ ಶಿಕ್ಷಣ ಬೇಕು. ಮೊಬೈಲ್, ಪ್ಯಾಶನ್‍ಗೆ ಒಳಗಾಗಿ ಯುವ ಶಕ್ತಿ ಮೋಜು, ಮಸ್ತಿಯಲ್ಲಿ ತೊಡಗಿರುವುದು ದುಃಖದ ಸಂಗತಿ ಎಂದು ವಿಷಾಧಿಸಿದರು.
ಶಿಕ್ಷಣ ತಳಮಟ್ಟದಿಂದ ಸಿಕ್ಕಾಗ ಮಾತ್ರ ಗುರು-ಹಿರಿಯರು, ತಂದೆ-ತಾಯಿಗಳನ್ನು ಗೌರವಿಸುವ ಸಂಸ್ಕಾರ ಬೆಳೆಯುತ್ತದೆ. ಸರಿಯಾದ ಶಿಕ್ಷಣ ಇಲ್ಲದ ಕಾರಣ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಶಿಕ್ಷಣ ಪಡೆದು ಪ್ರಜ್ಞಾವಂತರಾಗಿ ವೈಚಾರಿಕತೆಯ ಮೂಲಕ ಅನ್ಯಾಯವನ್ನು ಪ್ರತಿಭಟಿಸುವ ಧೈರ್ಯ ಬೆಳೆಸಿಕೊಳ್ಳಿ. ಸೃಜನಶೀಲತೆ ಇಲ್ಲದಿದ್ದರೆ ಅವ್ಯವಸ್ಥೆಗೆ ಒಳಗಾಗಬೇಕಾಗುತ್ತದೆ. ಅತಿಯಾದ ಸ್ವಾತಂತ್ರ್ಯವೂ ಕೆಲವೊಮ್ಮೆ ಅಪಾಯಕಾರಿ ಎಂದು ಹೇಳಿದರು.
ಹೆಣ್ಣಿಗೆ ಸೌಂದರ್ಯ ಪ್ರಕೃತಿದತ್ತವಾಗಿ ಬಂದಿದೆ. ಸೌಂದರ್ಯಕ್ಕಿಂತ ಪ್ರತಿಭೆ ಮೊದಲು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ವರ್ಣನೆಗಷ್ಠೆ ಸೀಮಿತಳೆ? ಎಲ್ಲಾ ರಂಗದಲ್ಲಿಯೂ ಹೆಣ್ಣು ಮುಂದೆ ಬರುತ್ತಿದ್ದಾಳೆ. ಹಾಗಾಗಿ ದೇಶದ ಪ್ರಗತಿಗೆ ಯುವ ಶಕ್ತಿ ಮುಖ್ಯ. ಭ್ರಷ್ಠಾಚಾರ, ಜಾತೀಯತೆ, ಕುಂದುಕೊರತೆ, ಕಂಠಕಗಳನ್ನು ಮೀರಿ ಬೆಳೆಯುವ ಶಕ್ತಿ ಹೆಣ್ಣಿಗಿದೆ. ಸಾಂಪ್ರದಾಯಿಕ ಡಾಂಬಿಕತನ ತುಂಬಾ ದಿನ ಉಳಿಯುವುದಿಲ್ಲ. ಪ್ರಾಚೀನ ನಾಗರೀಕತೆಯ ಪೂರ್ವದಲ್ಲಿ ಹೆಣ್ಣು ಮನೆಯ ಪ್ರಧಾನವಾಗಿದ್ದಳು. ಹಿಗ್ಗುವಿಕೆ, ಕುಗ್ಗುವಿಕೆಗೆ ಬಗ್ಗಬಾರದು. ಹೆಣ್ಣು ನೈಜವಾಗಿ ಬದುಕಬೇಕು. ಸಮಾನ ಲಿಂಗ ಪ್ರೀತಿಸುವುದನ್ನು ಕಲಿತರೆ ನಿಮ್ಮ ಮೇಲೆ ನಡೆಯುವ ದೌರ್ಜನ್ಯಗಳು ನಿಲ್ಲುತ್ತವೆ. ಹೆಣ್ಣನ್ನು ಪ್ರತಿದಿನ ಕಡೆಗಣಿಸಲಾಗುತ್ತಿದೆ. ಪಾಪ, ಪುಣ್ಯ, ಅನುಕಂಪಕ್ಕಿಂತ ಹೆಣ್ಣಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಿಗಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಡಾ.ಗುಡ್ಡದೇಶ್ವರಪ್ಪ ಹೆಚ್. ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಶಿಕ್ಷಣದ ಮೂಲಕ ಹೆಣ್ಣು ತನ್ನ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು. ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಸಂಸ್ಕøತಿ, ಸಂಸ್ಕಾರ ಕಲಿಯಬಹುದು. ದೇಶ ರಕ್ಷಣೆಗೆ ಯುವ ಶಕ್ತಿ ಮುಂದಾಗಬೇಕಿದೆ. ಸಂಸ್ಕøತಿ, ಸಂಸ್ಕಾರ, ಭಾವೈಕತ್ಯೆಯ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದು ನಿಜವಾದ ಶಿಕ್ಷಣ ಎಂದು ಹೇಳಿದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಚನ್ನಕೇಶವ ಸಿ. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮಂಜುನಾಥ ಬಿ. ಸಾಂಸ್ಕøತಿಕ ಸಮಿತಿ ಸಂಚಾಲಕಿ ಶ್ರೀಮತಿ ಲೀಲಾವತಿ ಆರ್. ಬಿ.ಕ್ಯೂ.ಎ.ಸಿ. ಸಂಚಾಲಕ ಡಾ.ಶಿವಣ್ಣ, ಗ್ರಂಥಪಾಲಕ ಕುಮಾರಸ್ವಾಮಿ, ಪತ್ರಾಂಕಿತ ವ್ಯವಸ್ಥಾಪಕ ಕೆ.ಎನ್.ಬಸಣ್ಣಗೌಡ, ಕ್ರೀಡಾ ಸಮಿತಿ ಸಂಚಾಲಕ ಶಿವಪ್ರಸಾದ್ ಆರ್. ಡಾ.ಸಿದ್ದಪ್ಪ ವೇದಿಕೆಯಲ್ಲಿದ್ದರು.