ಚಳ್ಳಕೆರೆ | ಬಾರೆ ಕಳ್ಳೆ ಹತ್ತಿ ಕಳಶ ಕೀಳುವ ಜಾತ್ರೆಗೆ ಕ್ಷಣಗಣನೆ

3 Min Read

 

ವರದಿ ಮತ್ತು ಫೋಟೋ ಕೃಪೆ,  ಸುರೇಶ್ ಬೆಳಗೆರೆ,           ಮೊ : 97398 75729

ಸುದ್ದಿಒನ್ : ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ನೆಲೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಪುರ್ಲೆಹಳ್ಳಿಯಲ್ಲಿ ಕಾಡು ಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಪರಿಷೆ (ಜಾತ್ರೆ) ಜನವರಿ 11 ರಂದು ಆರಂಭವಾಗಿದ್ದು,  ಫೆಬ್ರವರಿ 2  ರ ವರೆಗೆ ನಡೆಯಲಿದೆ. ಬಾರೆ ಕಳ್ಳೆ ಹತ್ತಿ ಕಳಶ ಕೀಳುವ ಜಾತ್ರೆ ನಾಳೆ (ಜನವರಿ.29) ನಡೆಯಲಿದ್ದು ಕ್ಷಣಗಣನೆ ಆರಂಭವಾಗಿದೆ.

ಜಾತಿ, ಧರ್ಮ ಭೇದವಿಲ್ಲದ ಈ ಆಚರಣೆ ಇಂದಿಗೂ ಭಾವೈಕ್ಯ ಹಾಗೂ ಸಾಮಾಜಿಕ ಸಾಮರಸ್ಯದ ದ್ಯೋತಕವಾಗಿದೆ. ಪರಿಷೆಯಲ್ಲಿ ಬಳ್ಳಾರಿ, ಹಾವೇರಿ, ಧಾರವಾಡ, ಶಿವಮೊಗ್ಗ, ಮೈಸೂರು, ಬೆಂಗಳೂರು, ಕೋಲಾರ, ತುಮಕೂರು ಸೇರಿದಂತೆ ವಿವಿಧೆಡೆಯ ಸಾವಿರಾರು ಭಕ್ತರು ಮಾತ್ರವಲ್ಲದೆ ಆಂಧ್ರದ ಅನಂತಪುರ, ರಾಯದುರ್ಗ, ಕಲ್ಯಾಣದುರ್ಗದಿಂದಲೂ ಜನ ಪಾಲ್ಗೊಳ್ಳುತ್ತಾರೆ.

ವಿಶಿಷ್ಟ ಆಚರಣೆ: ಕಾಡುಗೊಲ್ಲ ಬುಡಕಟ್ಟಿನ ಹದಿಮೂರು ಗುಡಿಕಟ್ಟಿನವರು ನವಣೆ ಮತ್ತು ಹುರುಳಿ ಬತ (ವ್ರತ) ಹಾಗೂ ಮನೆ ಶುದ್ಧೀಕರಣ ಮಾಡುವುದರೊಂದಿಗೆ ಆಚರಣೆ ಆರಂಭವಾಗುತ್ತದೆ. ಜಾತ್ರೆ ಮುಗಿಯುವವರೆಗೆ ಹುರುಳಿ, ನವಣೆ ಬಳಸುವುದಾಗಲಿ, ಮುಟ್ಟುವುದಾಗಲಿ ಮತ್ತು ನವಣೆ – ಹುರುಳಿ ಬೆಳೆದ ಹೊಲದಲ್ಲಿ ಹೋಗುವುದು ನಿಷಿದ್ಧ. ಈ ವ್ರತವನ್ನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ಕ್ಯಾತಪ್ಪನ ಹಿನ್ನೆಲೆ: ಕ್ಯಾತಪ್ಪ ದೇವರು ಕಾಡುಗೊಲ್ಲರಿಗೆ ಒಲಿಯುವ ಮೊದಲು ರೆಡ್ಡಿ ಜನಾಂಗದ ಹೇಮಾರೆಡ್ಡಿ ಮತ್ತು ಭೀಮಾರೆಡ್ಡಿ ಅವರಿಗೆ ಒಲಿದಿದ್ದ. ಇದರಿಂದ ರೆಡ್ಡಿಗಳಿಗೆ ಶ್ರೀಮಂತಿಕೆ ಬಂತು. ಆಗ ಅಲಕ್ಷ್ಯದಿಂದ ದೇವರನ್ನು ಹುರುಳಿ- ನವಣೆ ಕಣಜದಲ್ಲಿ ಹಾಕಿ ಮುಚ್ಚಿದರು.

ಈ ನಿರ್ಲಕ್ಷ್ಯಕ್ಕೆ ಬೇಸತ್ತ ಕ್ಯಾತೇ ದೇವರು ಕಾಡುಗೊಲ್ಲರ ದನಗಾಹಿ ಬೊಮ್ಮೈಲಿಂಗನಿಗೆ ಒಲಿದು ಬಂದು ಗೊಲ್ಲರ ತಾಣದಲ್ಲಿ ನೆಲೆ ನಿಲ್ಲುತ್ತಾನೆ. ಅದಕ್ಕಾಗಿಯೇ ಜಾತ್ರೆ ವೇಳೆಯಲ್ಲಿ ಹುರುಳಿ-ನವಣೆ ಬಳಸದಿರುವ ವ್ರತ. ಅಲ್ಲದೆ ಅತ್ತಿ, ಕಳ್ಳಿ ಹಾಗೂ ಬೇವಿನ (ದೇವರ) ಮರವನ್ನು ಕಡಿದು ನೆಲ ಮುಟ್ಟಿಸದಂತೆ ಜಾತ್ರೆ ನಡೆಯುವ ಸ್ಥಳಕ್ಕೆ ಸಾಗಿಸುತ್ತಾರೆ. ಕ್ಯಾತಪ್ಪ ದೇವರ ಮೂಲ ನೆಲೆಯಾದ ಚನ್ನಮ್ಮನಾಗತಿಹಳ್ಳಿ ಗ್ರಾಮದ ದೇವರ ಗುಡಿ ಸುತ್ತಲೂ ಜೂಜಿನ ಕಳ್ಳೆ ಹಾಕುತ್ತಾರೆ.

ಆಚರಣೆ: ಒಕ್ಕಲು ಮಕ್ಕಳು ಸಜ್ಜೆ ರೊಟ್ಟಿ, ಶೇಂಗಾ ಚಟ್ನಿ, ಅನ್ನ ಮೊಸರಿನ ಬುತ್ತಿ ಕಟ್ಟಿಕೊಂಡು ಗುಡಿ ನಿರ್ಮಿಸಲು ಹೋಗುತ್ತಾರೆ. ಜಾತ್ರೆ ನಡೆಯುವ ಪುರ‌್ಲೆಹಳ್ಳಿಯ ವಸತಿ ದಿಬ್ಬದಲ್ಲಿ ಬೆಳಗಿನ ಜಾವ ಏಳು ಗಂಟೆ ಸುಮಾರಿನಲ್ಲಿ 18-20 ಅಡಿ ಎತ್ತರದ ಬಾರೆ, ಕಾರೆ, ಬಂದ್ರೆ, ತುಗ್ಗಲಿಮೋರು ಮತ್ತು ಎರದ ಕಳ್ಳೆಯಿಂದ ದೇವರ ಒಕ್ಕಲ ಮಕ್ಕಳು (ಬೊಮ್ಮನ ಗೊಲ್ಲರು ಹಾಗೂ ಕೋಣನ ಗೊಲ್ಲರು) 20 ನಿಮಿಷದಲ್ಲಿ ಗುಡಿ ನಿರ್ಮಿಸಿ ಅದರ ತುದಿಗೆ ಕಂಚಿನ ಪಂಚ ಕಳಸಗಳನ್ನು ಏರಿಸುತ್ತಾರೆ.(ಇಡುತ್ತಾರೆ.

ಚನ್ನಮ್ಮನಾಗತಿಹಳ್ಳಿ ಕ್ಯಾತಪ್ಪದೇವರು, ಪರಿವಾರದ ದೇವರುಗಳಾದ ಬಂಜಗೆರೆ ವೀರಣ್ಣ, ಈರಬಡಕ್ಕ, ಆಂಧ್ರಪ್ರದೇಶ ಕಲ್ಯಾಣದುರ್ಗ ತಾಲ್ಲೂಕಿನ ತಾಳಿ ದೇವರು, ಬತವಿನ ದೇವರು, ಕೋಣನ ದೇವರು ಸೇರಿದಂತೆ ಎಲ್ಲಾ ಪೆಟ್ಟಿಗೆ ದೈವಗಳನ್ನು ಜಾತ್ರೆ ಜರುಗುವ ವಸತಿ ದಿಬ್ಬದ ಕಳ್ಳೆಮುಳ್ಳಿನ ಬೇಲಿಗುಡಿ ಒಳಗೆ ಪ್ರತಿಷ್ಠಾಪಿಸುತ್ತಾರೆ. ಅಲ್ಲಿ ಮೊದಲಿಗೆ ಗಂಗಾಪೂಜೆ, ಹಾವಿನಗೂಡು, ಕರವಿನಗೂಡು, ಮಜ್ಜನಭಾವಿ, ಹುತ್ತದ, ಕೋಣನ ಪೂಜೆ ಮುಗಿಸಿದ ನಂತರ ಗುಂಡಿ ತೆಗೆದು ಮಧ್ಯರಾತ್ರಿ ಮಡಿಯಿಂದ ಐವರು ಮುತ್ತೈದೆಯರು ಒನಕೆಯಿಂದ ನವಣೆ ಕುಟ್ಟಿ ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ.

ಇದಾದ ನಂತರವೇ ವ್ರತ ಮುಕ್ತಾಯ.

ಕಳಸ ಕೀಳುವ ರೋಚಕ ಕ್ರಿಯೆ: ಪುರ‌್ಲೆಹಳ್ಳಿ ವಸತಿ ದಿಬ್ಬದಲ್ಲಿ ನಡೆಯುವ ಜಾತ್ರೆಗೆ ಬಂದ ಭಕ್ತರು ವಿವಿಧ ಹರಕೆಯನ್ನು ತೀರಿಸುತ್ತಾರೆ. ಸಂಜೆ 4.30ಕ್ಕೆ ಸರಿಯಾಗಿ ತಣ್ಣೀರಿನಲ್ಲಿ ಸ್ನಾನ ಮಾಡಿದ ದೇವರ ಒಕ್ಕಲಿನ ಏಳೆಂಟು ಈರಗಾರರು, ಬರಿ ಮೈ-ಬರಿಗಾಲಲ್ಲಿ ನಾ ಮುಂದು ತಾ ಮುಂದು ಎಂದು ಕೇಕೆ ಹೊಡೆಯುತ್ತ ಕಳ್ಳೆ ಮುಳ್ಳಿನ ರಾಶಿಯಲ್ಲಿ ಬಿದ್ದು ಎದ್ದು ಹೊರಳಾಡುತ್ತಾ ಹುರುಪಿನಿಂದ ಗುಡಿ ಮೇಲೆ ಹತ್ತಿ ಕಳಸ ಕೀಳುತ್ತಾರೆ.

ಇದು ಕೆಲವೇ ನಿಮಿಷಗಳಲ್ಲಿ ನಡೆದು ಹೋಗುತ್ತದೆ. ಕಳಸ ಕೀಳುವುದೇ ಜಾತ್ರೆಯ ಪ್ರಧಾನ ಘಟ್ಟ. ಆದ್ದರಿಂದ ಈ ದೃಶ್ಯ ನೋಡಲು ಸಹಸ್ರಾರು ಜನ ಸೇರುತ್ತಾರೆ. ನಂತರ ಪರಿವಾರದ ಪೆಟ್ಟಿಗೆ ದೇವರುಗಳು ತಂತಮ್ಮ ಮೂಲ ಸ್ಥಳಕ್ಕೆ ಹಿಂತಿರುಗುತ್ತವೆ.

ತದನಂತರ ಚನ್ನಮ್ಮನಾಗತಿಹಳ್ಳಿಯ ಕ್ಯಾತಪ್ಪದೇವರ ಗುಡಿಗೆ ಬಾರೇ ಹಾಗೂ ತುಗ್ಗಲಿ ಕಳ್ಳೆಯಿಂದ ಕಿರು ಗುಡಿ ಕಟ್ಟಿ ಹುರುಳಿ (ಉಳ್ಳಿ) ಬೇಯಿಸಿ ನೈವೇದ್ಯ ಇಟ್ಟು ತೊಕ್ಕನ್ನು ಪ್ರಸಾದವಾಗಿ ಸ್ವೀಕರಿಸಿ ಹುರುಳಿ ವ್ರತ ಬಿಡುತ್ತಾರೆ. ಕೊನೆಯಲ್ಲಿ ದೇವರಿಗೆ ಕಟ್ಟಿದ ಕಂಕಣ ಬಿಚ್ಚುವುದರ ಮೂಲಕ ಪರಿಷೆ ಅಂತ್ಯಗೊಳ್ಳುತ್ತದೆ.

Share This Article
Leave a Comment

Leave a Reply

Your email address will not be published. Required fields are marked *