ಲೇಖನ
ಡಾ.ಮಹೇಶ್ ಕುಂಚಿಗನಾಳು
ಉಪನ್ಯಾಸಕ,
ಸ.ಪ.ಪೂ.ಕಾ ಚಿಕ್ಕಗೊಂಡನಹಳ್ಳಿ
ಚಿತ್ರದುರ್ಗ
ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿ ‘ರಾಮತೀರ್ಥಾಶ್ರಮ ಇದೆ ಎಂದರೆ ಬಹುತೇಕರಿಗೆ ತಿಳಿದೇ ಇಲ್ಲ. ಇದೆ ಎಂದರೆ, ಅರೇ ಹೌದ ಎಂದು ಉದ್ಘಾರ ತೆಗೆಯುತ್ತಾರೆ. ಸಾಮಾನ್ಯವಾಗಿ ಬಹುತೇಕ ಮಠಗಳ ಭೌತಿಕ ಸ್ವರೂಪಕ್ಕಿಂತ ಭಿನ್ನವಾದ ಲಕ್ಷಣವನ್ನು ಇದು ಒಳಗೊಂಡಿದೆ. ಒಳಗೆ ಪ್ರವೇಶಿಸಿದರೆ ಕಲ್ಕತ್ತದ ರಾಮಕೃಷ್ಣಶ್ರಮ ಪ್ರವೇಶಿಸಿದಂತೆ ಭಾಸವಾಗುತ್ತದೆ. ಪ್ರಶಾಂತತೆ, ನಿಶ್ಯಬ್ದತೆ, ಜ್ಯಾತತೀತ ಮನೋಭಾವನೆಗಳು ಇಲ್ಲಿ ಎದುರುಗೊಳ್ಳುತ್ತದೆ. ಹೊಸವರ್ಷದ ದಿನವಾದ ಇಂದು ರಾಮತೀರ್ಥಾಮೃತ ಆಶ್ರಮವು ಹೊಸ ಪುಸ್ತಕದ ಬಿಡುಗಡೆಗೆ ಸಾಕ್ಷಿಯಾಗಿದೆ.
ಒಂದು ಸಭೆಯೊಳಗೆ ತಾರಸಿ ಹಾರಿ ಹೋಗುವಂತಹ ನಗು. ಮಾತುಗಳಿಗೆ ಶಿಳ್ಳೆ, ಚಪ್ಪಾಳೆ, ವಾಗ್ಝರಿ, ಏರಿಳಿತ ಬೆರೆತ ಅದ್ಬುತ ಮಾತುಗಾರಿಕೆ ತುಂಬಿದೆ ಎಂದರೆ ಅಲ್ಲಿ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್‍ರವರ ಭಾಷಣ ಇದೆ ಎಂದು ಊಹಿಸಬಹುದು. ‘ನಾನು ಬುದ್ದನಲ್ಲ’ ಎಂಬ ಕೃತಿಯ ಮೂಲಕ ಕನ್ನಡ ಪುಸ್ತಕ ಲೋಕಕ್ಕೆ ಹೊಸ ಭರವಸೆಯ ಹುಟ್ಟುಹಾಕಿದರು. ಇದು ಬಂದ ಕಾಲಕ್ಕೆ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಹೊಸ ತವಕ, ತಲ್ಲಣವನ್ನು ರೂಪಿಸಿತು. ಇದು ಕಾವ್ಯ ಲೋಕಕ್ಕೆ ಮತ್ತೊಂದು ಜಗತ್ತನ್ನು ಪರಿಚಯಿಸಿದ ಕೃತಿಯಾಗಿದೆ. ಅಲ್ಲಿಂದ ಅನೇಕ ಕೃತಿಗಳನ್ನು ಹೊರತಂದಿದ್ದಾರೆ.
ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಸಂಗೇನಹಳ್ಳಿಯ ಹನುಮಂತರೆಡ್ಡಿ ಹಾಗೂ ಹನುಮಕ್ಕ ದಂಪತಿಗಳ ಪುತ್ರರಾಗಿ ಜನಿಸಿದರು. ಬಾಲ್ಯದಿಂದಲೂ ಪ್ರತಿಭಾನ್ವಿತರು, ಎಲ್ಲಾರೂ ತುಳಿಯದ, ಓಡಾಡದ ಹಾದಿಯಲ್ಲಿ ನಡೆಯಬೇಕು. ಅದು ಬದುಕಿನ ಮಾರ್ಗಸಹ ಆಗಬೇಕು ಎಂಬುದು ಇವರ ಬದುಕಿನ ಧೋರಣೆಯಾಗಿದೆ. ಅದೇ ರೀತಿಯಲ್ಲಿ ಬದುಕುತ್ತಿರುವ ವ್ಯಕ್ತಿಯಾಗಿದ್ದಾರೆ.
ಈಗಾಗಲೇ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ನನ್ನ ದೇವರು ಮತ್ತು ಇತರೆ ಕವಿತೆಗಳು, ಸಂವಹನ ಕನ್ನಡ, ಕನ್ನಡಿ ದವನ, ಕನ್ನಡ ಸಂಸ್ಕøತಿ, ಜಗಲೂರು ಸೀಮೆಯ ಜಾತ್ರೆಗಳು ಸಾಂಸ್ಕøತಿಕ ಅವಲೋಕನ ಪುಸ್ತಕ ಬಿಡುಗಡೆಯಾಗಿವೆ. ಆನೆಯ ಮೇಲೆ ಕುಮಾರವ್ಯಾಸ ಭಾರತ, ರಾಮಾಯಣ ದರ್ಶನಂ ಮೆರವಣಿಗೆ ಮಾಡಿದರು ಎಂದು ಸಾಹಿತ್ಯ ಚರಿತ್ರೆಗಳಲ್ಲಿ ಓದಿದ್ದೇವೆ. ಜಗಲೂರು ಸೀಮೆಯ ಜಾತ್ರೆಗಳು ಪ್ರಕಟವಾದಾಗ ಅಲ್ಲಿನ ಜನರು ಎತ್ತಿನ ಗಾಡಿಯ ಮೇಲೆ ಕೃತಿಯನ್ನು ಮೆರವಣಿಗೆ ಮಾಡಿದರು. ಇದು ಆ ಕೃತಿಯ ಹೆಗ್ಗಳಿಕೆಯಾಗಿದೆ. ಕನ್ನಡ ಸಾಹಿತ್ಯದ ಅತಿವಿರಾಳಾತೀತ ಘಟನೆಗಳಲ್ಲಿ ಇದು ಒಂದಾಗಿದೆ.
ಶ್ರೀಯುತ ಅಶೋಕ ಕಮಾರ್‍ರವರ ಮತ್ತೊಂದು ಕೃತಿಯಾದ ‘ರಾಮಾತೀರ್ಥಾಮೃತ ಇಂದು (ದಿನಾಂಕ:01-01-2026ರ ಗುರುವಾರದಂದು) ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ರಾಮತೀರ್ಥಾಶ್ರಮದಲ್ಲಿ ಬೆಳಿಗ್ಗೆ 12ಗಂಟೆಗೆ ಬಿಡುಗಡೆಯಾಗಿದೆ.
ಚಿತ್ರದುರ್ಗವನ್ನು ಮಠಗಳ ತವರೂರು ಎಂದು ಕರೆಯುತ್ತೇವೆ. ರಾಮತೀರ್ಥಾಶ್ರಮ ಇರುವುದು ಅನೇಕರಿಗೆ ತಿಳಿಯದ ಸಂಗತಿಯಾಗಿದೆ. ರಾಮತೀರ್ಥರು ಮೆದೇಹಳ್ಳಿಯಲ್ಲಿ ಅವಧೂತ ಪರಂಪರೆಗೆ ಸೇರಿದ ಮಠವೊಂದಕ್ಕೆ 20ನೇ ಶತಮಾನದ ಕೊನೆ ಭಾಗದಲ್ಲಿ ಬುನಾದಿ ಹಾಕುತ್ತಾರೆ. ಮೂರು ದಶಕಗಳಿಂದ ಹುಣ್ಣಿಮೆ ಹಾಗೂ ಗುರುಪೂರ್ಣಿಮೆಯಂದು ವಿಶೇಷ ಪೂಜೆ, ಅನ್ನ ಸಂತರ್ಪಣೆ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಿಕೊಂಡು ಬರಲಾಗಿದೆ. ಭರಮಸಾಗರ ಮೂಲದ ರಾಮತೀರ್ಥರು ಇಲ್ಲಿ ಸ್ಥಾಪಿಸಿದ ಮಠದ ಹಿನ್ನಲೆ, ಯಶೋಗಾಥೆ ಪವಾಡಗಳ ಕುರಿತಾಗಿ ಮೊದಲ ಬಾರಿಗೆ ತಮ್ಮ ಕೃತಿಯ ಮೂಲಕ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್ ರವರು ಬೆಳಕು ಚೆಲ್ಲಿದ್ದಾರೆ.
ಲೇಖಕರು ಕೃತಿಯನ್ನು ರಾಮತೀರ್ಥರ ಬಾಲ್ಯ, ಶಿಕ್ಷಣ, ಆಧ್ಯಾತ್ಮ ಸಂಸರ್ಗ, ವಿವಾಹ, ದೀಕ್ಷೆ, ಆಶ್ರಮ ಸ್ಥಾಪನೆ, ಪವಾಡಗಳ ನೆಲೆಯಲ್ಲಿ ವಿಭಜಿಸಿಕೊಂಡಿದ್ದಾರೆ. ಭರಮಸಾಗರದ ಹುಡುಗನೊಬ್ಬ ಪ್ರಚಾರ ರಹಿತ, ಗುಪ್ತವಾದ, ಕೇವಲ ಭಕ್ತರ ನೆರವಿನಲ್ಲಿ ನಡೆಯುವ ಅವಧೂತ ಪರಂಪರೆಗೆ ಸೇರಿದ ಮಠವೊಂದನ್ನು ನಿರ್ಮಿಸಿದ ರೀತಿಯನ್ನು ರೋಚಕವಾಗಿ ನಿರೂಪಿಸಿದ್ದಾರೆ. ಇದನ್ನು ಅವರ ಮಾತುಗಳಲ್ಲಿಯೇ ಓದಬೇಕು. ವೈಚಾರಿಕ ನೆಲೆಗಟ್ಟಿನ ಅಶೋಕರವರು ಆಧ್ಯಾತ್ಮದ ಪವಾಡಗಳ ಸಿಕ್ಕುಗಳನ್ನು ಬಿಡಿಸಿ ಅದರೊಳಗೆ ಆತ್ಮಸಾಕ್ಷತ್ಕಾರದ ಗುರುತುಗಳನ್ನು ಅನ್ವೇಷಿಸುವ ಪ್ರಯತ್ನ ಮಾಡಿದ್ದಾರೆ. ರಾಮತೀರ್ಥರು ಹಾಗೂ ಅವರ ಪತ್ನಿಯಾದ ಚೂಡಮಾತೆಯನ್ನು ರಾಮಕೃಷ್ಣ ಪರಮಹಂಸರು ಹಾಗೂ ಶಾರದದೇವಿಯವರೊಂದಿಗೆ ಸಂಸರ್ಗಗೊಳಿಸಿ ಚಿತ್ರಿಸಿರುವುದು ಔಚಿತ್ಯಪೂರ್ಣವಾಗಿದೆ. ರಾಮತೀರ್ಥರ ಆಧ್ಯಾತ್ಮಿಕ ಸಾಧನೆಗೆ ಅವರ ಪತ್ನಿ ನೆರವು ನೀಡಿದ್ದುದನ್ನು ವಿವರಿಸಿದ್ದಾರೆ. ಒಂದು ದಿನ ಸತಿಪತಿ ಇಬ್ಬರೂ ನಿರ್ಧಾರ ಮಾಡುತ್ತಾರೆ. ಚೂಡಮಾತೆಯವರು ತಮ್ಮ ಪತಿಯನ್ನು ತಂದೆಯಂತೆಯೂ, ಇವರು ತಮ್ಮ ಪತ್ನಿಯನ್ನು ತಾಯಿಯಂತೆ ಕಾಣುವ ಬದುಕಿನ ಮುಖ್ಯ ನಿರ್ಣಯಕ್ಕೆ ಬರುತ್ತಾರೆ. ಜೀವನಪೂರ್ತಿ ಈ ನಿಷ್ಠೆಯಿಂದಲೇ ಜೀವಿಸುತ್ತಾರೆ.
ಅಜ್ಞಾತವಾದ ಮಠವೊಂದು ಅಶೋಕ್‍ಕುಮಾರ್‍ರಲ್ಲಿ ಡಾಳವಾಗಿ ಪುಂಕಾನುಪುಂಕವಾಗಿ ಬಂದಿವೆ. ಓದುಗರನ್ನು ಆಧ್ಯಾತ್ಮಿಕ ಯಾತ್ರೆಯಲ್ಲಿ ಮಿಂದೆಳುವಂತೆ ಮಾಡುತ್ತವೆ. ಸಂಗೇನಹಳ್ಳಿಯವರ ವಿಶೇಷತೆ ಎಂದರೆ ಅಲಕ್ಷಿತ ಗುರುತಿಸಲಾದ ಸಂಗತಿಗಳ ಕಡೆ ಗಮನ ನೀಡುವುದು. ಚಿತ್ರದುರ್ಗದಲ್ಲಿ ಇಂದಿಗೂ ಜನಮಾನಸದಲ್ಲಿ ಎಲೆಮರೆಯಂತೆ ಉಳಿದಿರುವ ಮಠವೊಂದನ್ನು ಕುರಿತು ಮೊದಲ ಬಾರಿಗೆ ಸಂಗೇನಹಳ್ಳಿಯವರು ರಾಮತೀರ್ಥಾಮೃತ ಕೃತಿಯಲ್ಲಿ ಯಶ್ವಸಿಯಾಗಿ ಅಭಿವ್ಯಕ್ತಿಗೊಳಿಸಿದ್ದಾರೆ.
ಕೃತಿಯ ಶೀರ್ಷಿಕೆ ವಿಶೇಷವಾಗಿದೆ. ಶಾಂತವಧೂತರ ಶಿಷ್ಯ ರಾಮತೀರ್ಥವೆಂಬ ಅಮೃತ ಸಂದೇಶವನ್ನು ಉಣಬಡಿಸುತ್ತದೆ. ತಮ್ಮ ಬದುಕಿನಲ್ಲಿ ಯಾವುದೇ ಪ್ರಲೋಭನೆ, ದುರಾಸೆಗಳಿಗೆ ಒಳಗಾಗದೆ ನಿಷ್ಕಾಮವಾಗಿ ಜೀವಿಸಿದ ಸಂತರ ಜೀವನವನ್ನು ಕೃತಿ ಮತ್ತೊಂದು ಮಗ್ಗುಲಲ್ಲಿ ಯಶಸ್ವಿಯಾಗಿ ಪರಿಚಯಿಸುತ್ತದೆ.



















