ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 03 : ಲೋಕಸಭಾ ಚುನಾವಣೆ ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆಯಲಿದೆ. ಏಪ್ರಿಲ್ 4 ಅಂದರೆ ನಾಳೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಹೀಗಾಗಿ ಇಂದು ಮತ್ತು ನಾಳೆ ಹೆಚ್ಚಿನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರು ಏಪ್ರಿಲ್ 4, ಗುರುವಾರ ಬೆಳಗ್ಗೆ 10 ಗಂಟೆಗೆ ನಗರದ ಶ್ರೀ ನೀಲಕಂಠೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಲಕ್ಷಾಂತರ ಬೆಂಬಲಿಗರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರೆಳಿ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ ಕಾರ್ಯಕರ್ತರ ಉಪಸ್ಥಿತಿ ನನಗೆ ಆನೆ ಬಲ ತಂದುಕೊಡಲಿದೆ ಎಂಬುದು ನನ್ನ ಅಚಲ ನಂಬಿಕೆಯಾಗಿದೆ. ಆದ್ದರಿಂದ ತಾವುಗಳು ತಮ್ಮ ಸ್ನೇಹಿತರ ಜೊತೆ ನಾಮಪತ್ರ ಸಲ್ಲಿಕೆ ಸಂದರ್ಭ ನನ್ನೊಂದಿಗೆ ಇರಬೇಕೆಂಬುದು ನನ್ನ ಮಹದಾಸೆ ಎಂದು ಬಿ.ಎನ್. ಚಂದ್ರಪ್ಪ ಅವರು ಮನವಿ ಮಾಡಿದ್ದಾರೆ.
ದೇಶದಲ್ಲಿಯೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಾದರಿ ಆಗಿವೆ. ಟೀಕೆ ಮಾಡಿದವರೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಉತ್ಸಾಹ ತೋರುತ್ತಿದ್ದಾರೆ. ಅಷ್ಟರಮಟ್ಟಿಗೆ ಬಡವರ ಪರ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಯೋಜನೆಗಳು ದೇಶದ ಜನರ ಮೆಚ್ಚುಗೆ ಗಳಿಸಿವೆ. ಪ್ರತಿಪಕ್ಷಗಳ ನಿದ್ದೆಗೆಡಿಸಿವೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಸ್ತ್ರೀಶಕ್ತಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳ ಜೊತೆಗೆ ಹಸಿದವರು, ಶ್ರಮಿಕರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಹೀಗೆ ಅನೇಕ ಕಾರ್ಯಕ್ರಮಗಳು ಜನರ ಮನಗೆದ್ದಿವೆ ಎಂದಿದ್ದಾರೆ .
ನಾಮಪತ್ರ ಸಲ್ಲಿಕೆ ವೇಳೆ ಸಿಎಂ, ಡಿಸಿಎಂ ಭಾಗಿ : ಬಿಎನ್ ಚಂದ್ರಪ್ಪ ಅವರು ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ, ಸಚಿವ ಕೆಹೆಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ಶಾಸಕರಾದ ಟಿ ರಘುಮೂರ್ತಿ, ಬಿಜಿ ಗೋವಿಂದಪ್ಪ, ಎನ್ ವೈ ಗೋಪಾಲಕೃಷ್ಣ, ಮಾಜಿ ಸಚಿವ ಹೆಚ್. ಆಂಜನೇಯ ಮಾಜಿ ಶಾಸಕರು, ಹಿರಿಯ ಮುಖಂಡರು ಸೇರಿದಂತೆ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಲಿದ್ದಾರೆ.