ನವದೆಹಲಿ: ನಾನು ಕೇವಲ ದಲಿತ ನಾಯಕನಾಗಿ ಸ್ಪರ್ಧಿಸುತ್ತಿಲ್ಲ, ನಾನು ಕಾಂಗ್ರೆಸ್ ನಾಯಕನಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಾ, ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಉತ್ತಮ’ ಎಂದು ಶಶಿ ತರೂರ್‌ಗೆ ಹೇಳಿರುವುದಾಗಿ ಅವರು ತಿಳಿಸಿದರು. ಪಕ್ಷದ ಹಿರಿಯ ಮುಖಂಡರ ಒತ್ತಾಯದ ಮೇರೆಗೆ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಹೇಳಿದರು.
ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ ಅವರು, “ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸದ ಕಾರಣ, ನನ್ನ ಹಿರಿಯ ಸಹೋದ್ಯೋಗಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದರು. ಇಲ್ಲಿ ನಾನು ಯಾರ ವಿರುದ್ದವೂ ಹೋರಾಡುತ್ತಿಲ್ಲ. ಬದಲಾಗಿ ನಾನು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕಾಗಿ ಹೋರಾಡುತ್ತಿದ್ದೇನೆ ಎಂದರು.
“ನಾನು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ನನ್ನ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುತ್ತಿದ್ದೇನೆ. ನಾನು ಯಾವಾಗಲೂ ನನ್ನ ಸಿದ್ಧಾಂತ ಮತ್ತು ನೀತಿಗಳಿಗಾಗಿ ಹೋರಾಡುತ್ತೇನೆ. ನಾನು ಹಲವಾರು ಬಾರಿ ವಿರೋಧ ಪಕ್ಷದ ನಾಯಕ, ಮಂತ್ರಿ ಮತ್ತು ಶಾಸಕನಾಗಿದ್ದೇನೆ. ನೈತಿಕತೆ ಮತ್ತು ಸಿದ್ಧಾಂತಗಳಿಗಾಗಿ ಹೋರಾಡಲು ಬಯಸುತ್ತೇನೆ ಎಂದು ಹೇಳಿದರು.
ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ.