ಸುದ್ದಿಒನ್, ಹಿರಿಯೂರು, ಏಪ್ರಿಲ್. 14 : ತಾಲೂಕಿನ ವದ್ದೀಕೆರೆ ಗ್ರಾಮದ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಏಪ್ರಿಲ್ 11 ರಿಂದ 16 ರವರೆಗೆ ನಡೆಯಲಿದ್ದು, ಇಂದು (ಏಪ್ರಿಲ್ 14) ಬ್ರಹ್ಮ ರಥೋತ್ಸವ ಜರುಗಲಿದೆ.
ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಏಪ್ರಿಲ್ 11 ರಂದು ಕಂಕಣಧಾರಣೆ, ಏ 12 ರಂದು ಅಗ್ನಿಕುಂಡ,ಏ 13 ರಂದು ಚಿಕ್ಕ ರಥೋತ್ಸವ ನಡೆದಿದ್ದು ಇಂದು ಮಧ್ಯಾಹ್ನ 3: 30 ಕ್ಕೆ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಜಾನಪದ ಕಲಾವಿದರಿಂದ ವೈವಿದ್ಯಮಯ ಮೆರವಣಿಗೆ ನಡೆಯಲಿದೆ. ಸಂಜೆ 4.30 ಕ್ಕೆ ಬ್ರಹ್ಮ ರಥೋತ್ಸವ ಜರುಗಲಿದೆ. ಏ.15 ರಂದು ಉಂಡೆ ಮಂಡೆ, ಸಿದ್ಧಭುಕ್ತಿ ಕಾರ್ಯ ಹಾಗೂ ಏ.16 ರಂದು ಕಿರುಬಾನ, ವಸಂತೋತ್ಸವ ಮತ್ತು ಸಂಜೆ 6 ಕ್ಕೆ ಕಂಕಣ ವಿಸರ್ಜನೆ ಕಾರ್ಯ ನಡೆಯಲಿದೆ ಎಂದು ತಹಶೀಲ್ದಾರ್ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಸಿದ್ದೇಶ್ವರ ಸ್ವಾಮಿಯ ಹಿನ್ನೆಲೆ: ಸಿದ್ದಪ್ಪನ ಕುರಿತು ಹಲವಾರು ಜನಪದ ಕತೆಗಳು ಈ ಭಾಗದ ಹಳ್ಳಿಗರ ಬಾಯಲ್ಲಿ ನಲಿದಾಡುತ್ತವೆ. ಹೇಮಾವತಿಯ ಹೆಂಜಾರಪ್ಪನ ತಮ್ಮ ಸಿದ್ದಪ್ಪ ವದ್ದೀಕೆರೆಯ ಬಳಿ ಬಂದಾಗ ಬಾಯಾರಿಕೆಯಾದಾಗ ತ್ರಿಶೂಲದಿಂದ ನೆಲಕ್ಕೆ ತಿವಿದಾಗ ಬಾವಿ ಉಂಟಾಗಿ ನೀರು ಚಿಮ್ಮಿತಂತೆ. ಅಲ್ಲಿಂದ ಇಲ್ಲಿಯವರೆಗೆ ವರ್ಷಪೂರ್ತಿ ಈ ಬಾವಿಯಲ್ಲಿ ನೀರು ತುಂಬಿರುತ್ತದೆ. ಆದರೆ ಜಾತ್ರೆಯ ದಿನ ನೀರು ಖಾಲಿಯಾಗುವ ವಿಸ್ಮಯ ಈಗಲೂ ನಡೆಯುತ್ತಿದೆ.ಸಿದ್ದೇಶ್ವರ ಸ್ವಾಮಿ ದೇವಸ್ಥಾನವನ್ನು ಏಳನೇ ಶತಮಾನದಲ್ಲಿ ನೊಳಂಬ ರಾಜರ ಆಳ್ವಿಕೆ ಕಾಲದಲ್ಲಿ ಜೋಳರ ಶೈಲಿಯಲ್ಲಿ ನಿರ್ಮಿಸಲಾಗಿದೆ ಎಂಬ ಇತಿಹಾಸ ಇದೆ. ವೈಶ್ಯ ಜಾತಿಗೆ ಸೇರಿದ ಮುತ್ತಿನ ವ್ಯಾಪಾರಿ ಈ ದೇವಸ್ಥಾನ ನಿರ್ಮಾಣ ಮಾಡಿದ್ದಾರೆಂಬುದು ಜನಪದರ ಬಾಯಲ್ಲಿ ಬಂದಿದೆ. ಉಗ್ರ ಸ್ವರೂಪಿಯಾದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇಗುಲದಲ್ಲಿ ಪ್ರತಿ ಭಾನುವಾರ ವಿಶೇಷ ಪೂಜೆ ನಡೆಯಲಿದೆ. ಆರಂಭದಲ್ಲಿ ಈ ದೇವರಿಗೆ ಕಾಡುಗೊಲ್ಲ ಜನಾಂಗದವರು ಪೂಜೆ ನೆರವೇರಿಸುತ್ತಿದ್ದರು. ನಂತರದ ದಿನಗಳಲ್ಲಿ ಸಹೋದರ ಜಾತಿಯಾದ ಸಲಬೊಮ್ಮನಹಳ್ಳಿಯ ಕುಂಚಿಟಿಗ ಜಾತಿಗೆ ಪೂಜಾ ಕಾರ್ಯಸಲ್ಲಿಸಲು ಉಂಬಳಿ ನೀಡಲಾಯಿತು. ದೇವಾಲಯ 1974 ರಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟ ನಂತರ ಬ್ರಾಹ್ಮಣ ಸಮುದಾಯದವರು ಪೂಜೆ ನೆರವೇರಿಸಿಕೊಂಡು ಬರುತ್ತಿದ್ದಾರೆ.
ಇತಿಹಾಸ ಪ್ರಸಿದ್ಧ ಶ್ರೀಸಿದ್ದೇಶ್ವರಸ್ವಾಮಿ ಜಾತ್ರೆಯು ಪ್ರತಿವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಜಾತ್ರೆ ಸಂದರ್ಭದಲ್ಲಿ ಸೇರಿದಂತೆ ವಾರದ ಪೂಜೆಗೆ ಜಿಲ್ಲೆ, ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ಪಕ್ಕದ ಆಂದ್ರ ಮತ್ತಿತರ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸಿದ್ದೇಶ್ವರಸ್ವಾಮಿ ದೇವಸ್ಥಾನದ ಸಮೀಪ ಮಜ್ಜನ ಬಾವಿ ಇದ್ದು ಬ್ರಹ್ಮ ರಥೋತ್ಸವದ ದಿನ ಸಂಪೂರ್ಣ ಭರ್ತಿಯಾಗಿರುತ್ತದೆ. ರಥೋತ್ಸವದ ಮರು ದಿನ ಮಜ್ಜನ ಬಾವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಿದ್ಭಬುಕ್ತಿ ಮಾಡಿದ ನಂತರ ಮಜ್ಜನ ಬಾವಿ ಸಂಪೂರ್ಣ ಖಾಲಿಯಾಗುತ್ತದೆ. ಇದೊಂದು ಬಹುದೊಡ್ಡ ಪವಾಡ ಈಗಲೂ ನಡೆಯುತ್ತಿದೆ. ಕಂಕಣ ವಿಸರ್ಜನೆ ದಿನದ ನಂತರ ಮತ್ತೆ ಮಜ್ಜನ ಬಾವಿಗೆ ನೀರು ಹರಿದು ಬರಲಿದೆ. ಈ ಬಾವಿಯ ನೀರನ್ನು ಮೈಮೇಲೆ ಹಾಕಿಕೊಂಡರೆ ಆರೋಗ್ಯ ಭಾಗ್ಯ ದೊರೆಯಲಿದೆ ಎಂಬ ಪ್ರತೀತಿ ಇದ್ದು ದೇವಸ್ಥಾನ ಮತ್ತು ರಥೋತ್ಸವಕ್ಕೆ ಬರುವ ಭಕ್ತರು ಮೊದಲು ಮಜ್ಜನ ಬಾವಿ ನೀರನ್ನು ಮೈಮೇಲೆ ಹಾಕಿಸಿಕೊಳ್ಳುತ್ತಾರೆ.ಇದೀಗ ಜಾತ್ರೆಗೆ ತಾಲೂಕು ಆಡಳಿತದಿಂದ ಸಕಲ ಸಿದ್ಧತೆ ನಡೆದಿದ್ದು ವಾಹನ ನಿಲುಗಡೆಗೆ, ಕುಡಿಯುವ ನೀರಿಗೆ ಯಾವುದೇ ರೀತಿಯ ಅಡೆತಡೆಯಾಗದಂತೆ ಕ್ರಮ ವಹಿಸಲಾಗಿದೆ.
ತಹಶೀಲ್ದಾರ್ ಸಿ. ರಾಜೇಶ್ ಕುಮಾರ್
ರಥೋತ್ಸವ ಕುರಿತು ಸುದ್ದಿಒನ್ ನೊಂದಿಗೆ ಮಾತನಾಡಿದ ತಹಶೀಲ್ದಾರ್ ಸಿ. ರಾಜೇಶ್ ಕುಮಾರ್ ಅವರು, ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಸಿದ್ದೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಕುಡಿಯುವ ನೀರಿಗೆ ಎಷ್ಟೇ ಬೇಡಿಕೆ ಇದ್ದರೂ ನೀರಿನ ಕೊರತೆಯಾಗದಂತೆ 20 ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ. ಜಾತ್ರೆ ವೇಳೆ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ವ್ಯವಸ್ಥೆ ಇರಲಿದೆ. ಆರೋಗ್ಯ ಸೇವೆಗಾಗಿ ಇಬ್ಬರು ವೈದ್ಯರು, ನರ್ಸ್, ಅಂಬುಲೆನ್ಸ್ ಸೇವೆಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಜಮೀನು ಬಿತ್ತನೆ ಮಾಡಿರುವುದರಿಂದ ದೇವಾಲಯದಿಂದ ಸ್ವಲ್ಪ ದೂರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನಕ್ಕೆ ಬರುವ ನಾಲ್ಕು ಭಾಗಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಪ್ರಾಣಿ ಬಲಿ ನಿಷೇಧ ಮಾಡಲಾಗಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ರಥೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದರು.