ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 : ಚಿತ್ರದುರ್ಗದ ಮುರುಘಾಮಠ ಮತ್ತು ವಿದ್ಯಾಪೀಠಕ್ಕೆ ಮುಂದಿನ ಪೀಠಾಧ್ಯಕ್ಷರು ನೇಮಕವಾಗುವವರೆಗೂ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರೇ ಆಡಳಿತಾಧಿಕಾರಿಯಾಗಿ ಮುಂದುವರಿಯಲಿದಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಬುಧವಾರ (ಸೆಪ್ಟೆಂಬರ್.27) ಈ ಆದೇಶ ನೀಡಿದೆ.
ಮಠದ ಬೈಲಾ ಪ್ರಕಾರ ಶ್ರೀಮುರುಘರಾಜೇಂದ್ರ ವಿದ್ಯಾಪೀಠದ ಅಧ್ಯಕ್ಷರು ಮಠದ ಜಗದ್ಗುರುಗಳೇ ಆಗಿರಬೇಕು ಎಂದು ನೀಡಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ ಪ್ರಕರಣದಲ್ಲಿ ದಾಖಲಾದ ದೂರಿನ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಮುರುಘಾಮಠಕ್ಕೆ ಹೊಸದಾಗಿ ಪೀಠಾಧ್ಯಕ್ಷರು ನೇಮಕವಾಗುವ ತನಕ ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರೇ ಮುರುಘಾ ಮಠ, ವಿದ್ಯಾಪೀಠದ ಆಡಳಿತಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ಪೀಠ ಹೇಳಿದೆ. ಪ್ರಸ್ತುತ ಶ್ರೀಮತಿ ಬಿ.ಎಸ್. ರೇಖಾ ಅವರು ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿ ಮತ್ತು ಸಿಇಒ ಆಗಿ ಭರತ್ ಕುಮಾರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಶಿಕ್ಷಣ ಸಂಸ್ಥೆಗಳು, ಬಸವೇಶ್ವರ ಆಸ್ಪತ್ರೆ, ವೈದ್ಯಕೀಯ ಕಾಲೇಜು, ವಿದ್ಯಾರ್ಥಿಗಳು, ಸಿಬ್ಬಂದಿ ಹಿತದೃಷ್ಟಿಯಿಂದ ಈ ಆದೇಶ ನೀಡಲಾಗಿದೆ.