ಚಿತ್ರದುರ್ಗ, (ನ.19): ಜಾಗತೀಕರಣದ ಈ ಸಂದರ್ಭದಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸುತ್ತಾ, ಪರಂಪರೆಯನ್ನು ಗೌರವಿಸುತ್ತಾ ಆಧುನಿಕ ವಿಜ್ಞಾನ ತಂತ್ರಜ್ಞಾನವನ್ನು ಭಾಷೆಯ ಬೆಳವಣಿಗೆಗೆ ಬಳಸಿಕೊಳ್ಳುತ್ತಾ ಕನ್ನಡವನ್ನು ವಿಶ್ವಪ್ರಜ್ಞೆಯತ್ತ ಕೊಂಡೊಯ್ಯೋಣ ಎಂದು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ಚಿತ್ರದುರ್ಗ ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನಡೆ ನುಡಿ ಕನ್ನಡವಾಗಲಿ, ನಮ್ಮ ನೋಟ ಕನ್ನಡವಾಗಲಿ,
ಬದುಕು ಕನ್ನಡವಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಕ್ರಿಯೆಯೇ ಕನ್ನಡಾಭಿಮಾನವಾಗುವುದರ ಜೊತೆಗೆ ಭಾಷೆ ಬದುಕಿನ ನೆಲೆಗೆ ವಿಸ್ತಾರಗೊಳ್ಳುವ ಸಂದರ್ಭದಲ್ಲಿ ನಾವಿದ್ದೇವೆ. ಒಂದು ಭಾಷೆ ಉಳಿಯುವುದು ಜನಗಳಿಂದ, ಹಾಗಾಗಿ ಭಾಷೆಯನ್ನು ಉಳಿಸಿ ಎನ್ನುವಾಗ ಕನ್ನಡ ಜನರನ್ನು ಉಳಿಸಿ ಎನ್ನಬೇಕಿದೆ. ಇಲ್ಲಿ ಕನ್ನಡಿಗರು ಯಾರು ಎನ್ನುವ ಪ್ರಶ್ನೆ ಹಾಕಿಕೊಂಡರೆ, ಕನ್ನಡ ಮಾತೃಭಾಷೆಯಾಗಿರುವವರು ಮಾತ್ರ ಕನ್ನಡಿಗರೆ ಎನ್ನುವುದನ್ನು ಚಿಂತಿಸಬೇಕಿದೆ ಎಂದರು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಯ ಇತಿಹಾಸವನ್ನು ಅವಲೋಕಿಸಿದರೆ ಕನ್ನಡ ನಾಡು ಕುವೆಂಪು ಹೇಳುವಂತೆ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ವಿವಿಧತೆಯಲ್ಲಿ ಏಕತೆ ಇದೆ, ಸರ್ವ ಜಾತಿ ಜನಾಂಗಗಳ ಸಮನ್ವಯತೆ ಇದೆ, ಕಲೆ ಸಾಹಿತ್ಯ ಸಂಸ್ಕøತಿಗಳ ವೈವಿದ್ಯತೆ ಇದೆ. ಜೈನ ಧರ್ಮೀಯರು, ವೀರಶೈವರೂ, ವೈದಿಕರೂ, ಕ್ರೈಸ್ತ ಧರ್ಮೀಯರೂ, ಮುಸ್ಲಿಂ ಧರ್ಮೀಯರೂ ಅಷ್ಟೇ ಮುಖ್ಯವಾಗಿ ಜನಪದರು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.
ಮಾತೃಭಾಷೆ ಕನ್ನಡ ಅಲ್ಲದವರು ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕøತಿಯನ್ನು ಸಂಪನ್ನಗೊಳಿಸಿದ್ದಾರೆ. ಕನ್ನಡ ಭಾಷೆಯ ವಿಶೇಷತೆಯೆಂದರೆ ಬೇರೆ ಬೇರೆ ಭಾಷೆಗಳನ್ನು ಅರಗಿಸಿಕೊಳ್ಳುವ ಶಕ್ತಿ ಪಡೆದಿದೆ. ಸಂಸ್ಕøತ, ಪ್ರಾಕೃತ, ಇಂಗ್ಲೀಶ್ ಹೀಗೆ ಮೊದಲಾದ ಭಾಷೆಗಳ ಸಂಪರ್ಕಮತ್ತು ಸ್ವೀಕಾರದಿಂದ ಈ ಹೊತ್ತು ಕನ್ನಡ ವಿಶ್ವಮಾನ್ಯವಾಗಿದೆ. ಇಂಗ್ಲಿಶ್ ಬದುಕಿನ ಭಾಷೆ ಎನ್ನುವ ಹಾಗೆ ಕನ್ನಡವೂ ಅನ್ನದ ಭಾಷೆಯಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕಗಳಿಸಿದ ಸುಮಾರು 30 ಜನ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.