ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಮುಕ್ತಿನಾಥೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಸಾರ್ವಜನಿಕ ಹಿಂದೂ ರುದ್ರಭೂಮಿ ಸೇವಾ ಸಮಿತಿ ಟ್ರಸ್ಟ್‌ಗೆ ಉಮಾಶಂಕರ್ ಎಲೆಕ್ಟ್ರಿಕಲ್ಸ್ ಮಾಲೀಕ ಪಿ.ಸಿ.ವೀರಣ್ಣ ಪಟ್ಟಣಶೆಟ್ರು ತಮ್ಮ ಮಾತಾ ಪಿತೃಗಳಾದ ಶ್ರೀಮತಿ ಶಾಂತಮ್ಮ ಮತ್ತು ಪಿ.ಹೆಚ್.ಚನ್ನವೀರಪ್ಪ ಪಟ್ಟಣಶೆಟ್ರು ಇವರ ಸ್ಮರಣಾರ್ಥ ಭಾನುವಾರ ಮುಕ್ತಿವಾಹನವನ್ನು ಟ್ರಸ್ಟ್‌ಗೆ ಕೊಡುಗೆಯಾಗಿ ನೀಡಿದರು.
ಡಾ.ಕೋಮಲ ವಿ.ಮರಿಗುದ್ದಿರವರು ವಾಹನದ ಕೀಯನ್ನು ಟ್ರಸ್ಟ್‍ನ ಗೌರವಾಧ್ಯಕ್ಷ ಎಸ್.ವಿ.ಗುರುಮೂರ್ತಿರವರಿಗೆ ಹಸ್ತಾಂತರಿಸಿದರು.
ಮುಕ್ತಿವಾಹನ ಕೊಡುಗೆ ನೀಡಿ ನಂತರ ಮಾತನಾಡಿದ ಪಿ.ಸಿ.ವೀರಣ್ಣ ಎಲ್ಲಾ ಜಾತಿ ಧರ್ಮದವರ ಅಂತ್ಯಕ್ರಿಯೆಗೆ ವಾಹನವನ್ನು ಬಳಸಬೇಕು. ಜೊತೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಿರ್ವಹಣ ಮಾಡಬೇಕು ಎಂದು ತಿಳಿಸಿದರು.
ಮುಕ್ತಿ ವಾಹನದ ಕೀ ಸ್ವೀಕರಿಸಿ ಮಾತನಾಡಿದ ಟ್ರಸ್ಟ್‌ನ ಗೌರವಾಧ್ಯಕ್ಷ ಎಸ್.ವಿ.ಗುರುಮೂರ್ತಿ ಜೋಗಿಮಟ್ಟಿ ರಸ್ತೆಯಲ್ಲಿನ ಸಾರ್ವಜನಿಕ ಹಿಂದೂ ರುದ್ರಭೂಮಿ ತುಂಬಾ ಅವ್ಯವಸ್ಥೆಯಿಂದ ಕೂಡಿತ್ತು ಮೈದಾನದ ತುಂಬಾ ಬಳ್ಳಾರಿ ಜಾಲಿ ಗಿಡಗಳು ಬೆಳೆದಿದ್ದರಿಂದ ಅಂತ್ಯಸಂಸ್ಕಾರಕ್ಕೂ ಜಾಗವಿರಲಿಲ್ಲ. ಈಗ ಇಲ್ಲಿ ಸುಂದರವಾದ ದೇವಸ್ಥಾನ ನಿರ್ಮಾಣವಾಗಿರುವುದರಿಂದ ಮನಸ್ಸಿಗೆ ಮುದವೆನಿಸುತ್ತದೆ.
ಅಂತ್ಯಸಂಸ್ಕಾರಕ್ಕೆ ಬರುವವರಿಗೆ ಅನುಕೂಲವಾಗಲೆಂದು ಸ್ನಾನಗೃಹ ಹಾಗೂ ಶೌಚಾಲಯವನ್ನು ನಿರ್ಮಿಸಲಾಗಿದೆ. ನಿಮ್ಮ ಆಸೆಯಂತೆ ಮುಕ್ತಿ ವಾಹನವನ್ನು ಎಲ್ಲಾ ಜಾತಿಯವರ ಅಂತ್ಯ ಸಂಸ್ಕಾರಕ್ಕೆ ಬಳಸಲಾಗುವುದೆಂದು ಭರವಸೆ ನೀಡಿದರು.
ಮಡಿವಾಳ ಜನಾಂಗದ ಜಿಲ್ಲಾಧ್ಯಕ್ಷ ಬಿ.ರಾಮಜ್ಜ ಮಾತನಾಡುತ್ತ ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇಬೇಕು. ಹಾಗಾಗಿ ಹುಟ್ಟು-ಸಾವಿನ ನಡುವೆಯಿರುವ ಅಂತರದಲ್ಲಿ ಪರೋಪಕಾರದ ಕೆಲಸ ಯಾರು ಮಾಡುತ್ತಾರೋ ಅಂತಹವರು ಶಾಶ್ವತವಾಗಿ ಎಲ್ಲರ ಮನದಲ್ಲಿ ಉಳಿಯುತ್ತಾರೆ.
ಪಿ.ಸಿ.ವೀರಣ್ಣನವರು ತಮ್ಮ ತಂದೆ-ತಾಯಿಯ ಜ್ಞಾನಪಕಾರ್ಥವಾಗಿ ಮುಕ್ತಿವಾಹನವನ್ನು ಕೊಡುಗೆಯಾಗಿ ನೀಡಿ ಪುಣ್ಯದ ಕೆಲಸ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
31 ಅಡಿ ಎತ್ತರದ ಧ್ಯಾನ ಮಗ್ನ ಶಿವನ ಪ್ರತಿಮೆಗೆ ಎಸ್.ವಿ.ಗುರುಮೂರ್ತಿ ಐವತ್ತು ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಿದರು. ಇದೇ ರೀತಿ ಡಾ.ಕೋಮಲ ವಿ.ಮರಿಗುದ್ದಿ, ಪಿ.ಸಿ.ವೀರಣ್ಣ ಇವರುಗಳು ತಲಾ ಐವತ್ತು ಸಾವಿರ ರೂ.ಗಳ ದೇಣಿಗೆಯನ್ನು ಟ್ರಸ್ಟ್‌ಗೆ ಸಮರ್ಪಿಸಿದರು.
ಮುಕ್ತಿನಾಥೇಶ್ವರಸ್ವಾಮಿ ದೇವಸ್ಥಾನ ಹಾಗೂ ಸಾರ್ವಜನಿಕ ಹಿಂದೂ ರುದ್ರಭೂಮಿ ಸೇವಾ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಈ.ಅಶೋಕ್‍ಕುಮಾರ್, ಕಾರ್ಯದರ್ಶಿ ರಾಜು, ಉಪಾಧ್ಯಕ್ಷ ವೆಂಕಟೇಶ್‍ಬಾಬು, ನಾಗರಾಜು, ಶ್ರೀನಿವಾಸ್, ಮೋಹನ್, ದೊರೆಸ್ವಾಮಿ, ಹನುಮಂತಪ್ಪ, ಉಮಾಶಂಕರ್ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.