ಚಿತ್ರದುರ್ಗ, (ಅ.31) : ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಾಹಿತ್ಯ, ಸಾಂಸ್ಕøತಿಕ ಪ್ರಶಸ್ತಿಗಳನ್ನು ಆಯಾ ಜಿಲ್ಲೆಯಲ್ಲಿ ನೆಲೆಸಿರುವ ಹಾಗೂ ಜಿಲ್ಲೆಯ ಜೊತೆಗೆ ಒಡನಾಟ ಹೊಂದಿರುವ ವ್ಯಕ್ತಿಗಳಿಗೆ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಪ್ರಶಸ್ತಿಗಳನ್ನು ನೀಡುವಾಗ ಚಿತ್ರದುರ್ಗವನ್ನು ಕಡೆಗಣಿಸಲಾಗಿದೆ. ಜಿಲ್ಲೆಯಲ್ಲಿ ನೆಲೆಸಿರುವ ಹಾಗೂ ಜಿಲ್ಲೆಯ ಜೊತೆಗೆ ಒಡನಾಟ ಹೊಂದಿರುವವರನ್ನು ಪ್ರಶಸ್ತಿಗಳಿಗೆ ಪರಿಗಣಿಸಬೇಕು. ಆಧಾರ್ ಕಾರ್ಡ್ ಮತ್ತು ಚುನಾವಣೆಯ ಗುರುತಿನ ಚೀಟಿ ವಾಸಸ್ಥಳದ ಪ್ರಮುಖ ದಾಖಲೆಗಳಾಗಿವೆ. ಇವುಗಳನ್ನು ಆದರಿಸಿ ಪ್ರಶಸ್ತಿಗಳನ್ನು ನೀಡಬೇಕು. ಆಯಾ ಜಿಲ್ಲೆಗಳಲ್ಲಿ ವಾಸವಾಗಿರುವ ಸಾಹಿತಿ, ಕಲಾವಿದರು, ಸಮಾಜ ಸೇವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಬೇಕು.
ಚಲನಚಿತ್ರ ರಂಗಕ್ಕೆ ಸಂಬಂಧಿಸಿದಂತೆ ದತ್ತಣ್ಣನವರಿಗೆ ಪ್ರಶಸ್ತಿ ನೀಡಿರುವುದನ್ನು ಕಸಾಪ ಸ್ವಾಗತಿಸುತ್ತಿದೆ. ಅವರು ಅತ್ಯುತ್ತಮ ಪೋಷಕರ ನಟರಾಗಿದ್ದು ಇಡೀ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ. ಆದರೆ ಅವರನ್ನು ಚಿತ್ರದುರ್ಗ ಜಿಲ್ಲೆಗೆ ಸೀಮಿತಗೊಳಿಸುವುದು ಸರಿಯಲ್ಲ.
ಜಿಲ್ಲೆಯಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗೆ ಸಂಬಂಧಿಸಿದ ಹಲವಾರು ಜನರಿದ್ದಾರೆ. ಜಿಲ್ಲೆಯಲ್ಲಿ ನೆಲೆಸಿರುವ ಹಾಗೂ ನಿಕಟ ಸಂಬಂಧವನ್ನು ಹೊಂದಿರುವವರನ್ನು ಪರಿಗಣಿಸಿದೇ ಬೆಂಗಳೂರಿನಲ್ಲಿ ನೆಲೆಸಿರುವವರನ್ನು ಪರಿಗಣಿಸುವುದು ಸರಿಯಲ್ಲ. ಇದರಿಂದ ಜಿಲ್ಲೆಯ ಪ್ರತಿಭಾವಂತ ಸಾಹಿತಿ, ಸಾಧಕರು ಅವಕಾಶ ವಂಚಿತರಾಗುತ್ತಾರೆ. ಅಕಾಡೆಮಿಗಳ ಸದಸ್ಯತ್ವದಲ್ಲೂ ಇದೇ ರೀತಿಯ ಅವಗಣನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಗೆ ಹೆಚ್ಚಿನ ಅವಕಾಶಗಳನ್ನು ನೀಡುವಂತೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರನ್ನು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ ಶಿವಸ್ವಾಮಿ ಒತ್ತಾಯಿಸಿದ್ದಾರೆ.