ಚಿತ್ರದುರ್ಗ, (ಫೆಬ್ರವರಿ.16) : ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಮೂಲಕ ಕಾಳಜಿ ವಹಿಸುವ ನಿಟ್ಟಿನಲ್ಲಿ ಎಲ್ಲರೂ ಉತ್ತಮ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಸಭಾ ಭವನದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ಪಶು ವೈದ್ಯಕೀಯ ಪರೀಕ್ಷಕರ ಸಂಘ ಜಿಲ್ಲಾ ಶಾಖಾ ವತಿಯಿಂದ “ಹೈನುಗಾರಿಕೆಯಲ್ಲಿ ಕೃತಕ ಗರ್ಭಧಾರಣೆ ಮತ್ತು ಮೇವು ಬೆಳೆಗಳ ಮಹತ್ವ ಮತ್ತು ಜಾನುವಾರುಗಳಿಗೆ ಕಾಲ ಕಾಲಕ್ಕೆ ಲಸಿಕೆ” ಕುರಿತು ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರೈತರೊಂದಿಗೆ ನೇರ ಸಂಪರ್ಕ ಹೊಂದಿ ಪಶುವೈದ್ಯ ಪರೀಕ್ಷಕರು ರೈತರ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಗೂ ತುರ್ತು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಪಶು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಅತ್ಯುತ್ತಮವಾಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದೀರಿ ಎಂದು ಶ್ಲಾಘಿಸಿದರು.
ಅಪ್ಪ-ಅಮ್ಮ ಹಾಕಿದ ಆಲದ ಮರಕ್ಕೆ ನೇತು ಹಾಕಿಕೊಳ್ಳದೇ ಹೊಸ ಹೊಸ ತಂತ್ರಜ್ಞಾನದ ಮೂಲಕ ಬೆಳವಣಿಗೆ ಹೊಂದಬೇಕು. ಇಂದಿನ ದಿನಗಳಲ್ಲಿ ತಾಂತ್ರಿಕವಾಗಿ ಎಷ್ಟೇ ಬೆಳೆದರೂ ಸಾಲದು. ಎಲ್ಲಾ ಇಲಾಖೆಗಳಿಗೂ ತಂತ್ರಜ್ಞಾನ ಅತಿ ಅವಶ್ಯಕ. ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಪಶುಗಳಿಗೆ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು. ಸದ್ಯ ದುರಸ್ಥಿಯಲ್ಲಿರುವ ತೊಟ್ಟಿಗಳನ್ನು ಪುನರ್ ನಿರ್ಮಾಣ ಮಾಡಿ ಪಶುಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿ ದೇವಿ ಮಾತನಾಡಿ ಜಿಲ್ಲಾಧಿಕಾರಿ ಸೂಚಿಸಿದಂತೆ ತಾಂತ್ರಿಕ ಅಭಿವೃದ್ಧಿಗೆ ಯಾವ್ಯಾವ ಸಹಕಾರ ಬೇಕೋ ಎಲ್ಲ ಸಹಕಾರ ನೀಡುತ್ತೇವೆ. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹೊಸದಾಗಿ ಪಶು ಇಲಾಖೆ ಕೇಂದ್ರಗಳಲ್ಲಿ ನೀರಿನ ತೊಟ್ಟಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ತೊಟ್ಟಿ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಶು ಇಲಾಖೆಗಳು ಹೆಚ್ಚು ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಆಶಯ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮಾತನಾಡಿ, ಪಶು ಇಲಾಖೆ ಎಂದರೆ ಗ್ರಾಮೀಣ ಪ್ರದೇಶ ಜನರೊಂದಿಗೆ ಪ್ರೀತಿ, ವಿಶ್ವಾಸದಿಂದ ಪ್ರಾಣಿ-ಪಕ್ಷಿಗಳ ಜೀವ ಉಳಿಸುವಂತಹ ಕಾರ್ಯ ಸಾಧನೆಗಳನ್ನು ಪಶು ಇಲಾಖೆ ಮಾಡುತ್ತಾ ಬಂದಿದೆ. ಪಶು ಇಲಾಖೆಯಿಂದ ಸಿಗುವ ಯೋಜನೆಗಳ ಬಗ್ಗೆ ಗ್ರಾಮೀಣ ಜನರಿಗೆ ಮಾಹಿತಿ ಇರುವುದಿಲ್ಲ. ಹಾಗಾಗಿ ಗ್ರಾಮೀಣ ರೈತರಿಗೆ ಆ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದರ ಮೂಲಕ ಸಮಸ್ಯೆಗೆ ಸ್ಪಂದಿಸಬೇಕು.
ಒತ್ತಡಗಳ ಮಧ್ಯೆ ಪಶು ಚಿಕಿತ್ಸಾ ಕೇಂದ್ರ ಹಾಗೂ ಪಶು ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವಂತಹ ಸಿಬ್ಬಂದಿ ಅತ್ಯಂತ ಕೆಳ ಮಟ್ಟದಲ್ಲಿರುವಂತಹ ರೈತರ ಮನೆ ಬಾಗಿಲಿಗೆ ಭೇಟಿ ನೀಡಿ ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ, ಕೃತಕ ಗರ್ಭಧಾರಣೆ, ಕುರಿ-ಮೇಕೆಗಳಿಗೆ ಇ.ಟಿ.ಹೆಚ್‍ಎಸ್, ಪಿಪಿಆರ್,ಬಿಟಿ ಲಸಿಕೆ ಹಾಕುವ ಜವಾಬ್ದಾರಿ ಪಶು ವೈದ್ಯಕೀಯ ಪರೀಕ್ಷಕರ ಮೇಲಿದೆ ಎಂದರು.
ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಕಲ್ಲಪ್ಪ ಮಾತನಾಡಿ ಜಿಲ್ಲೆಯಲ್ಲಿ ಸುಮಾರು 3.28 ಲಕ್ಷ ಜಾನುವಾರಗಳು, 14.56 ಲಕ್ಷ ಕುರಿಗಳು, 3.85 ಲಕ್ಷ ಮೇಕೆಗಳು ಇವೆ, ಸುಮಾರು 50 ರಿಂದ 60 ಸಾವಿರ ಕುಟುಂಬಗಳು ಜೀವನೋಪಾಯಕ್ಕಾಗಿ ಕುರಿ ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ವಿಶೇಷವಾಗಿ ಈ ಜಿಲ್ಲೆಯು ಬರಗಾಲ ಪ್ರದೇಶವಾಗಿರುವುದರಿಂದ ಕುರಿ ಮತ್ತು ಮೇಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪಶುಗಳಿಗೆ ಲಸಿಕೆ ನೀಡುವುದರಲ್ಲಿ ವಿಳಂಬವಾಗಿದೆ ಅಧಿಕಾರಿಗಳು ಶೇ 100% ಲಸಿಕೆ ನೀಡಬೇಕೇಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಬಿರ ಸಂಪನ್ಮೂಲ ಉಪನ್ಯಾಸಕರಾದ ಡಾ. ಕೆ.ಜಿ ಮಹೇಶ್ವರಪ್ಪ, ಡಾ. ವಿ.ಕೆ ಮಂಜುನಾಥ್. ಪಶು ಇಲಾಖೆಯ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಪ್ರಸನ್ನಕುಮಾರ್, ಜಾನುವಾರು ಅಭಿವೃದ್ಥಿ ಇಲಾಖೆಯ ಅಧಿಕಾರಿ ಮರುಳಸಿದ್ದಯ್ಯ, ಜಾನುವಾರು ಅಧಿಕಾರಿ ಟಿ ಪುಟ್ಟರಾಜು, ಎ.ಆರ್. ತಿಪ್ಪೇಸ್ವಾಮಿ, ಟಿ.ಆರ್ ಆಂಜನೇಯ, ಗುರುರಾಜ್ ಶೇಠ್, ಲಾವಣ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.