ಪ್ರಭಾವಿ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ, ಅವರು ಪ್ರತಿನಿಧಿಸುತ್ತಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ಗಾಗಿ ಗುದ್ದಾಟ ಜೋರಾಗಿದೆ.
ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಮತ್ತು ಎಸ್‌ಎಸ್ ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್ ಮಲ್ಲಿಕಾರ್ಜುನ್ ಗೆ ಟಿಕೆಟ್ ನೀಡಬೇಕೆಂಬ ಪ್ರಯತ್ನ, ಮತ್ತೊಂದೆಡೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಈಗಾಗಲೇ ಸಿದ್ದರಾಮಯ್ಯನವರ ಬಳಿ, ಮುಸ್ಲಿಮರಿಗೆ ಟಿಕೆಟ್ ನೀಡುವಂತೆ ಹೇಳಿದ್ದಾರೆ.
ಶಾಮನೂರು ಕುಟುಂಬದಲ್ಲಿ ಈಗಾಗಲೇ, ಒಬ್ಬರು ಸಚಿವರಿದ್ದಾರೆ, ಶಾಸಕರಿದ್ದಾರೆ ಇನ್ನೊಂದು ಸಂಸದರು ಇದ್ದಾರೆ. ಶಿಗ್ಗಾಂವಿಯಲ್ಲಿ ನಾವು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ, ಗೆದ್ದು ಬಂದಿದ್ದೇವೆ. ಹಾಗಾಗಿ, ಮುಸ್ಲಿಮರಿಗೇ ಟಿಕೆಟ್ ನೀಡಲಿ. ನಾವು ಬೆಂಬಲವೂ ಕೊಡುತ್ತೇವೆ, ಹಣಕಾಸಿನ ನೆರವನ್ನೂ ಕೊಡುತ್ತೇವೆ”ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜು.ವಿ.ಶಿವಗಂಗಾ ಬಹಿರಂಗವಾಗಿಯೇ ಹೇಳಿದ್ದಾರೆ.
ಮುಸ್ಲಿಂ ಸಮುದಾಯದ ನಾಯಕರು ಪ್ರತ್ಯೇಕ ಸಭೆಯನ್ನು ನಡೆಸುತ್ತಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಮರ ಜನಸಂಖ್ಯೆ ಅತಿಹೆಚ್ಚು ಇರುವುದರಿಂದ, ನಮ್ಮ ಸಮುದಾಯದವರಿಗೆಯೇ ಟಿಕೆಟ್ ನೀಡಬೇಕೆಂದು ಹಲವು ಸುತ್ತಿನ ಸಭೆಗಳು ನಡೆಯುತ್ತಿದೆ.
ದುರ್ಗಾಂಬಿಕೆ ಜಾತ್ರೆ ನಡೆಯುತ್ತಿದೆ, ಮೊದಲು ಆ ಕೆಲಸಕ್ಕೆ ಆದ್ಯತೆಯನ್ನು ನೀಡೋಣ, ಉಪಚುನಾವಣೆಯ ವಿಚಾರ ಆಮೇಲೆ ಚರ್ಚೆ ಮಾಡೋಣ. ಉಪಚುನಾವಣೆಗೆ ಇನ್ನೂ ದಿನ ನಿಗದಿಯಾಗಿಲ್ಲ. ಈಗಲೇ ಈ ಬಗ್ಗೆ ಚರ್ಚೆ ಯಾಕೆ? ಎಂದು ಸಚಿವ ಮತ್ತು ಜಿಲ್ಲಾ ಉಸ್ತುವಾರಿಯೂ ಆಗಿರುವ ಎಸ್‌ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ.



