ಹಾಸನ ಕ್ಷೇತ್ರಕ್ಕಾಗಿ ಜೆಡಿಎಸ್ ಕುಟುಂಬದಲ್ಲಿಯೇ ಟಿಕೆಟ್ ಫೈಟ್ : ಭವಾನಿ ರೇವಣ್ಣನಿಗಾ..? ಸಾಮಾನ್ಯ ಕಾರ್ಯಕರ್ತನಿಗಾ..?
ಹಾಸನ ಜಿಲ್ಲೆ ಜೆಡಿಎಸ್ ನ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂ ಗೌಡ ಆಯ್ಕೆಯಾಗಿದ್ದರು. ಆ ಕ್ಷೇತ್ರವನ್ನು ಮರಳಿ ಪಡೆಯಬೇಕೆಂದು ಜೆಡಿಎಸ್ ಪಣ ತೊಟ್ಟಿದೆ. ಇದರ ನಡುವೆಯೇ ಭವಾನಿ ರೇವಣ್ಣ ತಾವೇ ಆ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿದ್ದಾರೆ.
ಇನ್ನು ಟಿಕೆಟ್ ಗಾಗಿ ಪತಿಯ ಮೊರೆ ಹೋಗಿರುವ ಭವಾನಿ ಅವರು, ರೇವಣ್ಣ ಅವರ ಮೂಲಕ ದೇವೇಗೌಡ ಅವರಿಗೆ ಟಿಕೆಟ್ ವಿಚಾರ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಆ ಕಡೆಯಿಂದ ಕುಮಾರಸ್ವಾಮಿ ಇದಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ ಎಂಬ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ.
ಈ ಬಾರಿಯ ಚುನಾವಣೆ ಬಹಳ ಮುಖ್ಯವಾಗಿದೆ. ಸಮ್ಮಿಶ್ರ ಸರ್ಕಾರದ ಯೋಚನೆ ಬಿಟ್ಟು ಸ್ವತಂತ್ರವಾಗಿ ಸರ್ಕಾರ ರಚಿಸುವ ಯೋಜನೆಯಲ್ಲಿದೆ ಜೆಡಿಎಸ್. ಹೀಗಾಗಿ ಜನರ ಮನಸ್ಸನ್ನು ಗೆಲ್ಲುವಂತ ಗಮನ ಹರಿಸಿದೆ. ಜೆಡಿಎಸ್ ಅಂದ್ರೆ ಮೊದಲೇ ಕುಟುಂಬ ರಾಜಕಾರಣ ಎಂಬ ಆರೋಪ ಎದುರಿಸುತ್ತಿದೆ. ಹೀಗಾಗಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಲು ಕುಮಾರಸ್ವಾಮಿ ಅವರು ಒಪ್ಪಿಗೆ ನೀಡುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಜೊತೆಗೆ ಈ ಬಗ್ಗೆ ಕುಮಾರಸ್ವಾಮಿ ಅವರು ಕೂಡ ಹೇಳಿದ್ದರು. ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರೂ ಗೆಲ್ಲಿಸಿಕೊಂಡು ಬರಬಹುದು ಎಂದಿದ್ದರು. ಈ ಮೂಲಕ ಭವಾನಿ ರೇವಣ್ಣ ಬದಲಿಗೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ.