ಬೆಂಗಳೂರು: ಯುಗಾದಿಯ ಬಳಿಕ ಅಲ್ಲಲ್ಲಿ ಕೊಂಚ ಮಳೆಯಾಗಿದೆ. ಇನ್ನು ಕೆಲ ಜಿಲ್ಲೆಯಲ್ಲಿ ಜೋರು ಮಳೆಯಾಗಿದೆ. ಆದರೆ ಬಿಸಿಲಿನ ಧಗೆ ಏನು ಕಡಿಮೆಯಾಗಿಲ್ಲ. ಮಳೆ ಇನ್ನಷ್ಟು ಬೇಗ ಬಂದರೆ ಸಾಕು ಎನ್ಜುತ್ತಿದ್ದಾರೆ ಜನ. ಇದರ ನಡುವೆ ಹವಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಕಡೆ ಗುಡುಗು ಸಹಿತ ಮಳೆಯಾಗುವ ಸೂಚನೆಯನ್ನು ನೀಡಿದೆ.
ಕರ್ನಾಟಕ ರಾಜ್ಯ ವಿಕೋಪ ನಿಗಾ ಕೇಂದ್ರ ಮಳೆ ವರದಿಯನ್ನು ಬಿಡುಗಡೆ ಮಾಡಿದೆ. ಇಂದಿನಿಂದ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ತಿಳಿಸಿದೆ. ಅದರಲ್ಲಿ ಚಾಮರಾಜನಗರ, ಕಲಬುರಗಿ, ಕೊಪ್ಪಳ, ದಾವಣಗೆರೆ, ಶಿವಮೊಗ್ಗ, ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಿದೆ.
ಬೆಳಗಾವಿ, ಬಳ್ಳಾರಿ, ಧಾರವಾಡ ಒಂದು ಅಥವಾ ಎರಡು ಕಡೆಯಲ್ಲಿ ಮೇಲ್ಮೈ ಗಾಳಿ ಸಹಿತ ಮಳೆಯಾಗಲಿದೆ. ರಾಜ್ಯಾದ್ಯಂತ ಅಲ್ಲಲ್ಲಿ ಚದುರಿದ ಮೋಡಗಳು ಕಾಣಿಸುತ್ತವೆ. ವಾತಾವರಣ ತಿಳಿಯಾಗಿದ್ದು, ಇಂದಿನಿಂದ ಮಳೆಯಾಗಲಿದೆ. ಏಪ್ರಿಲ್ 18 ರಿಂದ 19ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಗಾಳಿ ಮತ್ತು ಶುಷ್ಕ ವಾತಾವರಣವು ಹೆಚ್ಚಾಗುವ ಸಾಧ್ಯತೆಯಿದೆ.
ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಎರಡು ಕೈಕೊಟ್ಟ ಕಾರಣ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮಳೆಯೂ ಇಲ್ಲ, ಬೆಳೆಯೂ ಇಲ್ಲ. ಸರ್ಕಾರ ಘೋಷಣೆ ಮಾಡಿದ ಪರಿಹಾರದ ಪೂರ್ತಿ ಬಾಬ್ತು ಇಲ್ಲದೆ ನಷ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದಾನೆ. ಈ ಬಾರಿಯಾದರೂ ಮಳೆ ಉತ್ತಮವಾದರೆ ಬೆಳೆಯೂ ಲಾಭದಾಯಕವಾಗಿರಲಿದೆ. ಹೀಗಾಗಿ ರೈತ ದಿನವಿಡೀ ದೇವರಲ್ಲಿ ಮಳೆಯಾಗಲಿ ಎಂದೇ ಬೇಡಿಕೊಳ್ಳುತ್ತಿದ್ದಾನೆ.