ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕೊಡಗಿನಲ್ಲಿ ನಡೆದ ಘಟನೆ ದುರದೃಷ್ಟಕರ ಎಂದಿದ್ದಾರೆ.
ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ನಾನು ಸಮರ್ಥಿಸಿಕೊಳ್ಳಲ್ಲ. ಘಟನೆ ಸಂಬಂಧ 9 ಜನರನ್ನು ಬಂಧಿಸಲಾಗಿದೆ. ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಸಿದ್ದರಾಮಯ್ಯಗೆ ನಿನ್ನೆ ರಕ್ಷಣೆ ಕೊಡಲಾಗಿತ್ತು.
ಸಿದ್ದರಾಮಯ್ಯ ಯೋಚನೆ ಮಾಡಿ ಮಾತನಾಡುವುದು ಒಳ್ಳೆಯದು. ಸಾವರ್ಕರ್ ಫೋಟೋ ಮುಸ್ಲಿಂ ಏರಿಯಾದಲ್ಲಿ ಇಟ್ಟಿರಲಿಲ್ಲ. ಮಾಹಿತಿ ತಪ್ಪಿನಿಂದ ಸಿದ್ದರಾಮಯ್ಯನವರು ಹಾಗೆ ಹೇಳಿದ್ದಾರೆ. ಮುಸ್ಲಿಂ ಏರಿಯಾವನ್ನು ದೇಶದಿಂದಲೇ ಬೇರ್ಪಡಿಸುತ್ತಿದ್ದೀರಾ..? ಇಂತಹ ಹೇಳಿಕೆಗಳು ಎಲ್ಲರ ಭಾವನೆಗಳನ್ನು ಕೆರಳಿಸುತ್ತವೆ ಎಂದಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊಡಗಿನಲ್ಲಿ ನೆರೆ ಪ್ರದೇಶ ವೀಕ್ಷಣೆಗೆ ಭೇಟಿ ನೀಡಿದ್ದರು. ಈ ವೇಳೆ ಬಿಜೆಪಿ ಯುವ ಮೋರ್ಚಾ ಒ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಕಪ್ಪು ಬಾವುಟ ಪ್ರದರ್ಶಿಸಿ, ಗೋ ಬ್ಯಾಕ್ ಸಿದ್ದರಾಮಯ್ಯ ಘೋಷಣೆ ಕೂಗಿದ್ದರು. ಅವರ ಕಾರಿಗೆ ಮೊಟ್ಟೆ ಎಸೆದಿದ್ದರು.