ವರದಿ ಮತ್ತು ಫೋಟೋ ಕೃಪೆ, ಸುರೇಶ್ ಬೆಳಗೆರೆ ಮೊ : 97398 75729
ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್.10 : ಲೋಕದ ಬದುಕನ್ನು ಅರ್ಥ ಮಾಡಿಕೊಳ್ಳಲು ಶ್ರೀಕೃಷ್ಣನ ವಿಚಾರಧಾರೆಗಳನ್ನು ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಶ್ರೀಕೃಷ್ಣ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರೀಕೃಷ್ಣ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಶ್ರೀ ಕೃಷ್ಣ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ದೇಶದಲ್ಲಿ ಅಷ್ಟೇ ಅಲ್ಲದೆ ಹೊರದೇಶದಲ್ಲೂ ಸಹ ಶ್ರೀ ಕೃಷ್ಣನನ್ನು ಪೂಜಿಸುತ್ತಾರೆ.
ಆಚರಣೆಗಳು ಒಂದು ವರ್ಗಕ್ಕೆ ಸೀಮಿತವಾಗಬಾರದು. ಸಮಾಜದ ಮಹಾಪುರುಷರ ಬದುಕಿನ ಆದರ್ಶವನ್ನು ಪ್ರಸ್ತುತ ಸಮಾಜಕ್ಕೆ ಪರಿಚಯಿಸುವ ರೀತಿಯಲ್ಲಿರಬೇಕು. ಶ್ರೀಕೃಷ್ಣ ಭಗವಂತನ ವಿಚಾರ ಚಿಂತನೆಗಳು ಲೋಕ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಮಾರ್ಗವಾಗಿದೆ. ಕಾಡುಗೊಲ್ಲ ಸಮುದಾಯ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಹೇಳಿದರು.
ಕಲಾತಂಡಗಳ ಮೆರುಗು ಕಾಟಪ್ಪನಹಟ್ಟಿಯಿಂದ ಆರಂಭಗೊಂಡ ಶ್ರೀಕೃಷ್ಣನ ಮೆರವಣಿಗೆ ಕಲಾ ತಂಡಗಳೊಂದಿಗೆ ನಗರದ ನೆಹರು ವೃತ್ತದ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ಕಾಡುಗೊಲ್ಲ ಸಮುದಾಯದ ಆಚರಣಾ ಪದ್ಧತಿಗಳಲ್ಲಿ ಒಂದಾದ ಮಣೇವು ಕುಣಿತ ವಿಶೇಷವಾಗಿತ್ತು. ಕಂಬಳಿ ಹಾಸಿ ಕಾಯಿ, ಬೆಲ್ಲ ಇರಿಸಿ ಸುತ್ತಲೂ ದೇವರ ಪದಗಳು ಹೇಳುತ್ತಾ ಕುಣಿದು ಬಳಿಕ ಕಂಬಳಿ ಮೇಲೆ ಇರಿಸಿದ ಕಾಯಿ, ಬೆಲ್ಲ ಪಡೆದು ಪ್ರಾಸಾದದಂತೆ ಸ್ವೀಕರಿಸುವುದು, ಮಣೇವು ಕುಣಿತ ಗಮನಸೆಳೆಯಿತು.
ಕಾಡುಗೊಲ್ಲರ ಸಂಘದ ತಾಲೂಕಾಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಜಿಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಉಪ್ಪಾರಹಟ್ಟಿ ಅಜ್ಜಣ್ಣ, ಬಿ.ವಿ.ಸಿರಿಯಪ್ಪ, ಹಟ್ಟಿರುದ್ರಪ್ಪ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಶಶಿಧರ, ಕಾಟಪ್ಪನಹಟ್ಟಿ ವೀರೇಶ್, ಜಿ.ಟಿ.ವೀರಣ್ಣ, ಮಹಾಲಿಂಗಪ್ಪ, ಕಾಂತರಾಜ್, ಚಿತ್ರಾವತಿ, ಚಾರುಮತಿ, ಸಾಕಮ್ಮ, ಗೀತಮ್ಮ, ಹನುಮಂತಪ್ಪ ಇದ್ದರು.