ಸುದ್ದಿಒನ್, ಚಿತ್ರದುರ್ಗ, ಜೂನ್.23 :ಯಾವುದೇ ವ್ಯಕ್ತಿ ತಪ್ಪು ಮಾಡಿದಾಕ್ಷಣ ಆತನನ್ನು ಹಿಂಸಿಸುವುದು, ಹತ್ಯೆ ಮಾಡುವ ಹಂತಕ್ಕೆ ಹೋಗುವುದು ಸರಿಯಲ್ಲ. ತಪ್ಪು ಮಾಡಿದವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ಕೊಡಿಸಬೇಕು ಎಂದು ಬೆಂಗಳೂರಿನ ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಹೇಳಿದರು.
ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಆರ್ಥಿಹ ಸಹಾಯ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಹಾಗೆಂದ ಮಾತ್ರಕ್ಕೆ ಅವನನ್ನು ಒಡೆಯುವುದು, ಬಡಿಯುವುದು, ಕೊಲೆ ಮಾಡುವ ಹಂತಕ್ಕೆ ಹೋಗುವುದು ಸರಿಯಲ್ಲ. ನಾವೆಲ್ಲರೂ ಸಂವಿಧಾನದ ಚೌಕಟ್ಟಿನಲ್ಲಿ ಬದುಕುತ್ತಿದ್ದೇವೆ. ಹಾಗಾಗಿ ಕಾನೂನಾತ್ಮಕವಾಗಿ ನಡೆದುಕೊಳ್ಳಬೇಕು ಎಂದರು.
ರೇಣುಕಾಸ್ವಾಮಿ ಅವರನ್ನು ಅತ್ಯಂತ ಕ್ರೂರವಾಗಿ ಕೊಲ್ಲಲಾಗಿದೆ. ಇದು ನಾಗರೀಕ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಖಂಡಿಸಬೇಕಾದ ವಿಚಾರ. ಅವರ ಕುಟುಂಬದ ಸದಸ್ಯರನ್ನು ನೋಡಿದರೆ ತುಂಬಾ ನೋವಾಗುತ್ತದೆ. ಮಾನವೀಯತೆಯ ಸಮಾಜ ಅವರ ಬೆಂಬಲಕ್ಕೆ ನಿಲ್ಲಬೇಕು. ಅವರ ನೋವಿಗೆ ಸ್ಪಂದಿಸುವ ಮೂಲಕ ತಮ್ಮ ಕೈಲಾದ ನೆರವು ನೀಡಬೇಕು. ಪ್ರಕರಣದಲ್ಲಿ ಭಾಗಿಯಾಗಿರುವವರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕಾನೂನಿ ಅಡಿಯಲ್ಲಿ ಶಿಕ್ಷೆಯಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅನುಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಆರ್ಥಿಕ ನೆರವು ನೀಡಿದರು. ಲಗ್ಗೆರೆ ನಾರಾಯಣಸ್ವಾಮಿ ಅವರ ಪತ್ನಿ ಹಾಗೂ ಬೆಂಗಳೂರು ಮಹಾ ನಗರಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಮಂಜುಳಾ, ಚಾಲಕರ ಪರಿಷತ್ ಅಧ್ಯಕ್ಷ ಸೋಮಶೇಖರ್, ಕಾಂಗ್ರೆಸ್ ಮುಖಂಡ ನಿರಂಜನ್, ರಾಜು, ಕೇಶವಮೂರ್ತಿ, ಜೆಡಿಎಸ್ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಓ.ಪ್ರತಾಪ್ ಜೋಗಿ, ಮನು ಬೊಮ್ಮಗಟ್ಟೆ, ಪರಭು ಎರೇನಹಳ್ಳಿ ಮತ್ತಿತರರು ಹಾಜರಿದ್ದರು.