ಮೈಸೂರು : ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದೀಗ ಈ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಾ.ಯತೀಂದ್ರ ಸಿದ್ದರಾಮಯ್ಯ, ಮೂಡಾ ಹಂಚಿಕೆ ಸಂಬಂಧ ತನಿಖೆ ನಡೆದು ವರದಿ ಬರುವವರೆಗೂ ಆ ನಿವೇಶನಗಳು ನಮ್ಮದಲ್ಲ ಎಂದಿದ್ದಾರೆ.
ಮೂಡಾ ನಿವೇಶನ ಹಂಚಿಕೆ ಸಂಬಂಧ ನ್ಯಾಯಾಂಗ ತನಿಖೆ ಆಗುತ್ತಿದೆ. ಈಗಾಗಲೇ ಮೂಡಾ ಸೈಟ್ ವಾಪಾಸ್ ಕೊಡುವ ಬಗ್ಗೆ ಹೇಳಲಾಗಿದೆ. 2005ರಿಂದ ಯಾರಿಗೆಲ್ಲಾ ನಿವೇಶನ ಕೊಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ಅರ್ಥ ನಮಗೆ ಕೊಟ್ಟಿರುವ ನಿವೇಶನವೂ ರದ್ದಾಗಿದೆ ಎಂಬುದು. ಈಗ ಆ ನಿವೇಶನಗಳು ನಮ್ಮ ಸುಪರ್ದಿಗೆ ಬರುವುದಿಲ್ಲ. ನ್ಯಾಯಾಂಗ ತನಿಖೆ ನಡೆದು ವರದಿ ಬರುವವರೆಗೂ ಸೈಟ್ ಗಳು ನಮ್ಮದಲ್ಲ. ತನಿಖೆ ನಡೆಸಿದ ಬಳಿಕ ಸೈಟ್ ಗಳು ನಮ್ಮದು ಎಂದರೆ ನಿವೇಶನವನ್ನು ವಾಪಾಸ್ ನಮಗೆ ಕೊಡುತ್ತಾರೆ.
ಇಲ್ಲವಾದರೆ ಕುಟುಂಬದವರು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಮ್ಮ ತಂದೆ ಭ್ರಷ್ಟಾಚಾರ ಮಾಡಿದ್ದಾರೆಂದು ಬಿಂಬಿಸುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಬಿಜೆಪಿಯ ಪಾದಯಾತ್ರೆಗೆ ಟಕ್ಕರ್ ಕೊಡಲು ಕಾಂಗ್ರೆಸ್ ನಾಯಕರು ಜನಾಂದೋಲನ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಇತ್ತ ಬಿಜೆಪಿ ನಾಯಕರ ಪಾದಯಾತ್ರೆ 7ನೇ ದಿನಕ್ಕೆ ಕಾಲಿಟ್ಟಿದ್ದು, ಮೈಸೂರು ಸಮೀಪಿಸುತ್ತಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಮೈಸೂರಿನಲ್ಲಿ ಜನಾಂದೋಲನಾ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಮೈಸೂರು ಪೊಲೀಸರ ಬಿಗಿ ಭದ್ರತೆಯಿಂದ ಕೂಡಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.