ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಏ.19) : ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಈ ಬಾರಿ 120 ಸ್ಥಾನಗಳಲ್ಲಿ ಗೆಲ್ಲಬೇಕೆಂಬ ಗುರಿಯಿಟ್ಟುಕೊಂಡಿದ್ದು, ಸ್ಪಷ್ಠ ಬಹುಮತದೊಂದಿಗೆ ಜೆಡಿಎಸ್.ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಬುಧವಾರ ರಘು ಆಚಾರ್ ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಸ್ಥಾನಗಳಲ್ಲಿ ಪಕ್ಷ ಗೆಲ್ಲುತ್ತದೆಂಬ ನಿರೀಕ್ಷೆಯಿದೆ.
ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸುತ್ತಾಡಿ ಹದಿನೈದರಿಂದ ಹದಿನಾರು ಗಂಟೆಗಳ ಕಾಲ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ನೀಡಿದ ಕೊಡುಗೆಗಳನ್ನು ಜನತೆಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಟಿಕೇಟ್ ವಂಚಿತರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಿದ್ದಾರೆ. ಇಂತಹ ದೊಡ್ಡ ಮಟ್ಟದ ಬದಲಾವಣೆ, ಪರಿವರ್ತನೆ ರಾಜ್ಯದಲ್ಲಿ ಹಿಂದೆಂದೂ ಆಗಿರಲಿಲ್ಲ ಎಂದು ಹೇಳಿದರು.
ಚುನಾವಣೆಗೆ ಸಂಬಂಧಿಸಿದಂತೆ ಖಾಸಗಿ ಸಮೀಕ್ಷೆಗಳ ವರದಿ ತಲೆಕೆಳಗಾಗುತ್ತದೆ. ಮಂಡ್ಯದಲ್ಲಿ ಜೆಡಿಎಸ್.ಮುಗಿಸುವುದಾಗಿ ಕೆಲವರು ಸವಾಲು ಹಾಕುತ್ತಿದ್ದಾರೆ. ನಾನು ಯಾರಿಗೂ ಸವಾಲು ಒಡ್ಡುವುದಿಲ್ಲ. ರಾಮನಗರ, ಚನ್ನಪಟ್ಟಣದಲ್ಲಿ ಅಭ್ಯರ್ಥಿಗಳನ್ನು ಉಳಿಸಬೇಕಿತ್ತು.
ಮಂಡ್ಯದಲ್ಲಿ ನಮ್ಮ ಪಕ್ಷದಿಂದ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿಗಳಿದ್ದಾರೆ. ಅಲ್ಲಿ ನಾನು ಸ್ಪರ್ಧಿಸುವ ಅಗತ್ಯವಿಲ್ಲ. ಸತ್ಯಾಂಶ ಏನು ಎನ್ನುವುದನ್ನು ಮುಂದಿನ ದಿನಗಳಲ್ಲಿ ಜನ ತೀರ್ಮಾನಿಸುತ್ತಾರೆ. ಹೆಚ್.ಡಿ.ರೇವಣ್ಣನವರ ಮಾರ್ಗದರ್ಶನದಲ್ಲಿಯೇ ಹಾಸನದಲ್ಲಿ ಚುನಾವಣೆ ನಡೆಯುತ್ತದೆ ಎಂದರು.
ಅಭ್ಯರ್ಥಿ ರಘು ಆಚಾರ್, ಆಶಾ ರಘು ಆಚಾರ್, ನ್ಯಾಯವಾದಿ ಪ್ರತಾಪ್ ಜೋಗಿ ಈ ಸಂದರ್ಭದಲ್ಲಿ ಹಾಜರಿದ್ದರು.