ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಇನ್ನು ಕೂಡ ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಇದೀಗ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ತಪ್ಪೊಪ್ಪಿಗೆ ಹೇಳಿಕೆ ಬರೆದುಕೊಟ್ಟಿದ್ದು, ಅದರಲ್ಲಿ ವಿನಯ್ ಕುಲಕರ್ಣಿಯೇ ಕೊಲೆ ಮಾಡಿಸಿದ್ದು ಎಂದು ಒಪ್ಪಿಕೊಂಡಿದ್ದಾರೆ. ಇದರಿಂದ ವಿನಯ್ ಕುಲಕರ್ಣಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಈ ಸಂಬಂಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲು ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿವಿನಯ್ ಕುಲಕರ್ಣಿ ಪಾತ್ರದ ಕುರಿತು ಬರೆದುಕೊಟ್ಟಿದ್ದಾರೆ.
ಯೋಗೀಶ್ ಗೌಡ ಹತ್ಯೆಗೆ ಧಾರವಾಡದ ಯುವಕರು ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ ಶಾಸಕ ವಿನಯ್ ಕುಲಕರ್ಣಿ ಸೂಚನೆ ಮೇರೆಗೆ ಬೆಂಗಳೂರಿನಿಂದ ಕರೆಸಿ, ಸಂಚು ರೂಪಿಸಿ ಯೋಗೀಶ್ ಗೌಡನನ್ನು ಕೊಲೆ ಮಾಡಲಾಗಿದೆ. ಯೋಗೀಶ್ ಗೌಡ ಕೊಲೆಗೆ ಮೊದಲು ವಿಕಾಸ್ ಕಲಬುರಗಿ, ಕೀರ್ತಿ ಕುಮಾರ್ ಕುರಹಟ್ಟಿ, ವಿಕ್ರಂ ಬಳ್ಳಾರಿ, ಸಂದೀಪ್ ಸವದತ್ತಿ, ಮಹಾಬಲೇಶ್ಚರ ಅವರಿಗೆ ಸುಪಾರಿ ನೀಡಲು ವಿನಯ್ ಕುಲಕರ್ಣಿ ನಿರ್ಧರಿಸಿದ್ದರು. ಆದರೆ ಆ ಹುಡುಗರು ಈ ಸುಪಾರಿಯನ್ನು ತಿರಸ್ಕರಿಸಿದರು.
ಬಳಿಕ ಪ್ರಕರಣದ 8ನೇ ಆರೋಪಿಯಾಗಿರುವ ದಿನೇಶ್ ನನ್ನು ಭೇಟಿಯಾಗಿ, ವಿನಯ್ ಕುಲಕರ್ಣಿ ಪ್ರಸ್ತಾಪ ಮುಂದಿಡಲಾಯಿತು. ಇದಕ್ಕೆ ದಿನೇಶ್ ಎರಡು ದಿನಗಳ ಕಾಲಾವಕಾಶ ಕೇಳಿದನು. ಬಳಿಕ ಮುತ್ತಗಿಯನ್ನು ಭೇಟಿಯಾದ ದಿನೇಶ್ ಹತ್ಯೆಗೆ ಒಪ್ಪಿಗೆ ಸೂಚಿಸಿ, 20 ಲಕ್ಷಕ್ಕೆ ಬೇಡಿಕೆ ಇಟ್ಟರು. ಪ್ರಕರಣದಲ್ಲಿ ತನ್ನ ಹೆಸರು ಬರಬಾರದು, ಬಂಧನವಾಗದಂತೆ ನೋಡಿಕೊಳ್ಳಬೇಕು, ಜೊತೆಗೆ ಶರಣಾಗುವುದಿಲ್ಲ ಎಂಬ ಷರತ್ತು ಹಾಕಿದನು. ಅದನ್ನು ವಿನಯ್ ಕುಲಕರ್ಣಿಗೆ ತಲುಪಿಸಲಾಯ್ತು. ಈ ಷರತ್ತಿಗೆ ಒಪ್ಪಿದ ವಿನಯ್ ಕುಲಕರ್ಣಿ ಹತ್ಯೆ ಬಳಿಕ ಧಾರವಾಡ ಹುಡುಗರನ್ನು ಶರಣಾಗಿಸುವ ಯೋಜನೆ ಹೇಳಿದ್ದರಂತೆ. ಈ ಎಲ್ಲಾ ವಿಚಾರಗಳನ್ನು ಮುತ್ತಗಿ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಬರೆದುಕೊಟ್ಟಿದ್ದಾರೆ ಎನ್ನಲಾಗಿದೆ.