ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 31 : ಇಂದು ಇಡೀ ಭಾರತ ಚಿತ್ರದುರ್ಗದ ಕಡೆ ನೋಡ್ತಾ ಇದ್ರೆ, ವಿಶ್ವ ನಮ್ಮ ಭಾರತದ ಕಡೆ ನೋಡುವ ಹಾಗೆ ನಮ್ಮ ವಿಜ್ಞಾನಿಗಳು ಮಾಡಿ ತೋರಿಸಿದ್ದಾರೆ” ಎಂದು ಇಸ್ರೋ ಹಿರಿಯ ವಿಜ್ಞಾನಿ ಶ್ರೀನಾಥ್ ರತ್ನಾಕರ ಅಭಿಪ್ರಾಯಪಟ್ಟರು.
ಅವರು ಚಿತ್ರದುರ್ಗದ ದೇವರಾಜ್ ಅರಸ್ ಎಜುಕೇಶನ್ ಸೊಸೈಟಿಯ ಸಭಾಂಗಣದಲ್ಲಿ ಚಿತ್ರದುರ್ಗ ಸೈನ್ಸ್ ಫೌಂಡೇಶನ್, ಶಾಲಾ ಶಿಕ್ಷಣ ಇಲಾಖೆ ಹಾಗೂ ದೇವರಾಜ್ ಅರಸ್ ಎಜುಕೇಶನ್ ಸೊಸೈಟಿ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಭಾರತೀಯ ಬಾಹ್ಯಾಕಾಶ ದಿನದ ಅಂಗವಾಗಿ ಜಿಲ್ಲೆಯ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಅವರು ಮುಂದುವರೆದು ಮಾತನಾಡಿ ” ಚಂದ್ರಯಾನ – 3 ರ ಸ್ಮರಣೆ ಮತ್ತು ಇಸ್ರೋದ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಇಸ್ರೋ ಚಂದ್ರನಲ್ಲಿಗೆ ಮಾನವಸಹಿತ ನೌಕೆಯನ್ನು ಕಳುಹಿಸಲು ಆರಂಭಿಸಿದೆ. ಶುಕ್ರಯಾನ, ಮಂಗಳಯಾನ, ಹಾಗೂ ಆದಿತ್ಯಯಾನದ ಬಗ್ಗೆಯೂ ಇಸ್ರೋ ನೌಕೆಗಳನ್ನು ಕಳುಹಿಸಲು ಯೋಜನೆಗಳನ್ನು ರೂಪಿಸಲು ಸಿದ್ಧವಾಗುತ್ತಿದೆ. ಭವಿಷ್ಯದಲ್ಲಿ ಭಾರತ ಇಡೀ ವಿಶ್ವವೇ ಬೆರಗಾಗುವಂತೆ ನೋಡುವ ಕಾರ್ಯಗಳನ್ನು ಮಾಡುತ್ತಿದೆ. ಎಂದು ಇಸ್ರೋ ವಿಜ್ಞಾನಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದೇವರಾಜ್ ಅರಸ್ ಎಜುಕೇಶನ್ ಸೊಸೈಟಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ಎಂ.ಸಿ.ರಘುಚಂದನ್ ಅವರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿಜ್ಞಾನ ಶಿಕ್ಷಕರು ವಿಜ್ಞಾನಿಗಳ ಅತ್ಯುತ್ತಮ ವಿಚಾರವನ್ನು ತಿಳಿಯುವ ಮೂಲಕ ವಿದ್ಯಾರ್ಥಿಗಳಿಗೂ ಬಾಹ್ಯಾಕಾಶದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿ. ಎಂದು ತಿಳಿಹೇಳಿದರು. ಸೈನ್ಸ್ ಫೌಂಡೇಶನ್ ಚಿತ್ರದುರ್ಗ ಉಪಾಧ್ಯಕ್ಷ ಚಳ್ಳಕೆರೆ ಯರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಡಾ.ಜಿ. ಎನ್. ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ, ಖಜಾಂಚಿ ನಾಗಲಿಂಗರೆಡ್ಡಿ, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ವಿಶೇಷ ವರದಿಗಾರರಾದ ಸುಭಾಷ್, ಶಿವಮೊಗ್ಗ ಜಾಹೀರಾತು ವಿಭಾಗದ ಮುಖ್ಯಸ್ಥರಾದ ಕಾರ್ತಿಕ್, ಚಿತ್ರದುರ್ಗ ಜಾಹೀರಾತು ವಿಭಾಗದ ಉದಯರವಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ನಿರ್ದೇಶಕರಾದ ಮಂಜುನಾಥ್ ಸ್ವಾಗತಿಸಿ, ಶಿಕ್ಷಕ ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿದರು.