ಮಂಡ್ಯ: ನಟಿ ಸುಮಲತಾ ಮಂಡ್ಯದಲ್ಲಿ ಚುನಾವಣೆಗೆ ನಿಂತಾಗಲೂ ಬಿಜೆಪಿ ನಾಯಕರು ಪರೋಕ್ಷವಾಗಿ ಬೆಂಬಲ ನೀಡಿದ್ದರು. ಗೆಲುವು ಸಾಧಿಸಿದ ಬಳಿಕ ಸುಮಲತಾ ಬಿಜೆಪಿಗೇನೆ ಹೋಗ್ತಾರೆ ಎಂಬ ಚರ್ಚೆ ಜೋರಾಗಿ ನಡೆದಿತ್ತು. ಆದ್ರೆ ಅದಕ್ಕೆ ಸುಮಲತಾ ಅಂದು ಕೂಡ ಕ್ಲಾರಿಟಿ ನೀಡಿದ್ದರು. ನಾನು ಬಿಜೆಪಿಗೆ ಹೋಗಲ್ಲ ಅಂತ. ಈಗ 2023ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಈಗಲೂ ಅದೇ ವಿಚಾರ ಚರ್ಚೆಗೆ ಬಂದಿದೆ. ಸುಮಲತಾ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರಾ ಎಂಬುದು.

ಈ ಬಗ್ಗೆ ಸುಮಲತಾ ಮತ್ತೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಸೇರ್ಪಡೆಯ ಬಗ್ಗೆ ನಾನು ಯೋಚನೆ ಮಾಡಿಲ್ಲ. ಬಿಜೆಪಿ ನಾಯಕರು ಈ ಬಗ್ಗೆ ಮಾತನಾಡಿದ್ದಾರೆ. ಆದರೆ ನಾನಿನ್ನು ಚರ್ಚೆ ಮಾಡಿಲ್ಲ. ಸದ್ಯಕ್ಕೆ ಬಿಜೆಪಿ ಸೇರುವ ಯಾವ ಯೋಚನೆಯೂ ಇಲ್ಲ. ಫ್ಲೆಕ್ಸ್ ನಲ್ಲಿ ಫೋಟೋ ಹಾಕಿಕೊಳ್ಳುತ್ತಾರೆ. ಅದು ಅವರವರ ಅಭಿಮಾನಕ್ಕೆ ಎಂದಿದ್ದಾರೆ.

ಸಚ್ಚಿದಾನಂದಗೆ ನನ್ನ ಬೆಂಬಲವಿದೆ ಎಂಬುದು ಸೀಕ್ರೇಟ್ ಆಗಿ ಏನು ಉಳಿದಿಲ್ಲ. ನನ್ನ ಬೆಂಬಲ ಖಂಡಿತ ಸಚ್ಚಿದಾನಂದ ಅವರಿಗೆ ಇದೆ. ಅದನ್ನು ಓಪನ್ ಆಗಿಯೇ ಘೋಷಣೆ ಮಾಡಿಕೊಂಡಿದ್ದೇನೆ. ಹೀಗಾಗಿ ಸಚ್ಚಿದಾನಂದ ಫ್ಲೆಕ್ಸ್ ನಲ್ಲಿ ನನ್ನ ಫೋಟೋ ಹಾಕಿಕೊಂಡಿದ್ದಾರೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಬೇಡಿ ಎಂದಿದ್ದಾರೆ.
ಬಿಜೆಪಿ ನಾಯಕರಿರುವ ಫ್ಲೆಕ್ಸ್ ನಲ್ಲಿ ಸುಮಲತಾ ಫೋಟೋ ಕೂಡ ಅಳವಡಿಕೆ ಮಾಡಲಾಗಿತ್ತು. ಈ ವಿಚಾರವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಸುಮಲತಾ ಮಾತನಾಡಿದ್ದು, ಪಕ್ಷ ಸೇರ್ಪಡೆಯ ಬಗ್ಗೆ ನಾನು ಇನ್ನು ಯಾವುದೇ ತೀರ್ಮಾನ ಮಾಡಿಲ್ಲ. ನಾನು ಹೋದ ಕಡೆಯಲ್ಲೆಲ್ಲಾ ಜನ ಪಕ್ಷ ಸೇರ್ಪಡೆ ಬಗ್ಗೆ ಕೇಳುತ್ತಾರೆ. ಜೊತೆಗೆ ಜನರು ಹೀಗೆ ಇರಿ ಅಂತಾನೂ ಹೇಳ್ತಾ ಇದ್ದಾರೆ ಎಂದಿದ್ದಾರೆ.

