ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್.05 : ತೋಟಗಾರಿಕೆ ಇಲಾಖೆ ಜಾಗವನ್ನು ಜಿಲ್ಲಾಧಿಕಾರಿಗಳ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ನೀಡಲು ಸರ್ಕಾರ ಆದೇಶಿಸಿರುವುದನ್ನು ಹಿಂದಕ್ಕೆ ಪಡೆಯುವಂತೆ ಜಿಲ್ಲಾ ಹಾಪ್‍ಕಾಮ್ಸ್‍ನ ರಾಜ್ಯ ಪ್ರತಿನಿಧಿ ಎಸ್.ಎಂ.ಎಲ್.ತಿಪ್ಪೇಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತೋಟಗಾರಿಕೆ ಇಲಾಖೆಗೆ ಸೇರಿದ ಆರು ಎಕರೆ ಹತ್ತು ಗುಂಟೆ ಹಾಗೂ ಹಾಪ್‍ಕಾಮ್ಸ್‍ನ 20 ಗುಂಟೆ ಜಾಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಮಾಡುವುದರಿಂದ ರೈತರು, ಪರಿಸರ ಪ್ರೇಮಿಗಳು ತೊಂದರೆ ಅನುಭವಿಸಬೇಕಾಗುತ್ತದೆ. 2156 ಗಿಡ-ಮರಗಳು ಈ ಜಾಗದಲ್ಲಿದ್ದು, ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಎಲ್ಲವನ್ನು ನಾಶಪಡಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟುವುದು ಬೇಡ. ಕುಂಚಿಗನಹಾಳ್ ಬಳಿ ಜಿಲ್ಲಾಧಿಕಾರಿ ಕಚೇರಿಗೆ ಕಟ್ಟಡ ಕಟ್ಟಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಶಿಲ್ಪಭವನ, ಪೊಲೀಸ್ ಕವಾಯತು ಮೈದಾನದ ಜಾಗವನ್ನು ನೂತನ ಡಿಸಿ.ಕಚೇರಿ ಕಟ್ಟಡಕ್ಕೆ ಪಡೆದುಕೊಳ್ಳಲಿ. ಅದನ್ನು ಬಿಟ್ಟು ತೋಟಗಾರಿಕೆ ಇಲಾಖೆ ಜಾಗದ ಮೇಲೆ ಸರ್ಕಾರಕ್ಕೇಕೆ ಕಣ್ಣು ಎಂದು ಪ್ರಶ್ನಿಸಿದರು.?
ರೈತರಿಗೆ ಬೀಜ, ಗೊಬ್ಬರ, ಕೃಷಿ ಪರಿಕರಗಳ ವಿತರಣೆಗಾಗಿಯೇ ಮೀಸಲಿದ್ದ, ಹಾಪ್‍ಕಾಮ್ಸ್ ಕಟ್ಟಡವನ್ನು ಕೆಡವುವುದು ಬೇಡ. ಒಂದು ವೇಳೆ ಇದೆ ಜಾಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಆರಂಭಿಸಿದರೆ ಉಗ್ರವಾದ ಹೋರಾಟ ನಡೆಸಲಾಗುವುದೆಂದು ಎಸ್.ಎಲ್.ಎಂ.ತಿಪ್ಪೇಸ್ವಾಮಿ ಎಚ್ಚರಿಸಿದರು.
ಟಾರ್ಗೆಟ್ ಟೆನ್ ಥೌಸೆಂಡ್‍ನ ಸಿದ್ದರಾಜು ಮಾತನಾಡಿ ಬಯಲುಸೀಮೆ ಚಿತ್ರದುರ್ಗದಲ್ಲಿ ಗಿಡಗಳನ್ನು ನೆಟ್ಟು ದೊಡ್ಡ ಮರವನ್ನಾಗಿ ಬೆಳೆಸುವುದು ತುಂಬಾ ಕಷ್ಟ. 2015 ರಿಂದ ಇಲ್ಲಿಯವರೆಗೂ ನಲವತ್ತು ಸಾವಿರ ಗಿಡಗಳನ್ನು ನೆಟ್ಟಿದ್ದೇವೆ. ಗಿಡ-ಮರಗಳನ್ನು ಕಡಿದರೆ ಉಸಿರಾಟಕ್ಕೆ ಶುದ್ದ ಗಾಳಿ ಇಲ್ಲದಂತಾಗಿ ಸಕಲ ಜೀವರಾಶಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಕುಂಚಿಗನಹಾಳ್ ಸಮೀಪವೆ ಜಿಲ್ಲಾಧಿಕಾರಿ ನೂತನ ಕಚೇರಿ ಆರಂಭಿಸಿದರೆ ಚಿತ್ರದುರ್ಗ ವಿಸ್ತರಣೆಯಾಗಿ ಅಭಿವೃದ್ದಿಯಾಗುತ್ತದೆ. ತೋಟಗಾರಿಕೆ ಇಲಾಖೆ ಜಾಗದಲ್ಲಿ ನೂತನ ಕಚೇರಿ ನಿರ್ಮಾಣವಾಗುವುದು ಬೇಡ ಎಂದರು.
ಹಾಪ್‍ಕಾಮ್ಸ್‍ನ ಜಿಲ್ಲಾಧ್ಯಕ್ಷ ಶಂಕರಮೂರ್ತಿ, ಉಪಾಧ್ಯಕ್ಷ ಅರುಣ್, ನಿರ್ದೇಶಕರುಗಳಾದ ಕೆಂಚವೀರಪ್ಪ, ಚಂದ್ರಶೇಖರ್, ರೈತ ಮುಖಂಡ ಸೂರಪ್ಪ, ಸತ್ಯನಾರಾಯಣರೆಡ್ಡಿ ಮುರಳಿ, ನಾಗರಾಜ್‍ಬೇದ್ರೆ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.




