ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ (ಅ.29): ಕೃಷಿ ಇಲಾಖೆಯ ಕೆ-ಕಿಸಾನ್ ಮಾದರಿಯಲ್ಲಿ ಜಿ.ಪಂ.ಫಲಾನುಭವಿಗಳ ಮಾಹಿತಿ ಸಂಗ್ರಹಣೆಗೆ ಹೊಸ ತಂತ್ರಾಂಶ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯತಿಯ ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ನಗರದ ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಪತ್ರಕರ್ತರೊಂದಿಗೆ ಪರಿಚಯಾತ್ಮಕ ಸಂವಾದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಕೃಷಿ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುವ ವೇಳೆ, ಕೃಷಿ ಇಲಾಖೆಯಿಂದ ಸೌಲಭ್ಯ ಪಡೆಯುವ ರೈತ ಫಲಾನುಭವಿಗಳ ಮಾಹಿತಿ ಸಂಗ್ರಹಣೆಗೆ ಅನುಕೂಲವಾಗುವಂತೆ ಕೆ-ಕಿಸಾನ್ ತಂತ್ರಾಂಶವನ್ನು ರೂ.1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. 2020 ರಿಂದ ತಂತ್ರಾಂಶವನ್ನು ಕಾರ್ಯನಿರ್ವಹಿಸತ್ತಿದೆ. 742 ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ರೈತರು ಪಡೆಯುವ ಸೌಲಭ್ಯಗಳನ್ನು ಜಿಯೋ ಟ್ಯಾಂಗ್ ಭಾಚಿತ್ರದೊಂದಿಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರೈತರ ಫ್ರೂಟ್ಸ್( FRUTS ) ಐಡಿ ಆಧರಿಸಿ ತಂತ್ರಾಂಶ ಕಾರ್ಯನಿರ್ವಹಿಸುತ್ತದೆ. ರೈತರು ಖರೀದಿಸುವ ಪರಿಕರಗಳಿಗೆ ರೈತರ ಖಾತಯಿಂದಲೇ ಆರ್.ಟಿ.ಜಿ.ಸ್ ಮೂಲಕ ನೊಂದಾಯಿತ ಕಂಪನಿಗೆ ಹಣ ಕಡಿತವಾಗುತ್ತದೆ. ಕೃಷಿ ಇಲಾಖೆ ರೈತರ ಮಾಹಿತಿ ಪಡೆದು ಕಂಪನಿಗೆ ಸರ್ಕಾರ ವಂತಿಕೆ ನೀಡಿ ನೇರವಾಗಿ ಫಲಾನುವಿಗಳ ಹೆಸರಿಗೆ ಸಲಕರಣೆಗಳನ್ನು ನೀಡಲಾಗುತ್ತದೆ. ರೈತರು ಇಲಾಖೆಯಿಂದ ಪಡೆದ ಸವಲತ್ತುಗಳ ವಿವರ ಅಂಗೈ ತುದಿಯಲ್ಲಿ ಲಭ್ಯವಾಗುತ್ತಿದೆ. ಇದುವರೆಗೆ ರಾಜ್ಯದ 30 ಲಕ್ಷ ರೈತ ಫಲಾನುಭವಿಗಳ ಮಾಹಿತಿ ಕೆ-ಕಿಸಾನ್ ತಂತ್ರಾಂಶದಲ್ಲಿ ಲಭ್ಯವಿದೆ. ಇದರಿಂದ ಇಲಾಖೆ ಸೌಲಭ್ಯಗಳ ಹಂಚಿಕೆಯಲ್ಲಿ ಪಾರದರ್ಶಕತೆ ಕಂಡುಬಂದಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಇಲಾಖೆ ಸವಲತ್ತುಗಳನ್ನು ವಿತರಿಸಲು ಅನುಕೂಲವಾಗಿದೆ. ತಂತ್ರಾಂಶದ ಬಳಕೆಯಿಂದ ಕೃಷಿ ಇಲಾಖೆ ಅಧಿಕಾರಿಗಳು ಸ್ವಾಭಿಮಾನ ಹಾಗೂ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಶೇ.99 ರಷ್ಟು ತಂತ್ರಾಂಶ ಬಳಕೆಯಾಗಿದೆ. ಕೆ-ಕಿಸಾನ್ ತಂತ್ರಾಂಶ ಅಭಿವೃದ್ದಿಗೆ ರಾಷ್ಟ್ರ ಮಟ್ಟದಲ್ಲೂ ಮನ್ನಣೆ ದೊರೆತಿದೆ ಎಂದರು.
ಕೆ-ಕಿಸಾನ್ ಮಾದರಿಯಲ್ಲಿ ಜಿ.ಪಂ.ಫಲಾನುಭವಿಗಳ ಮಾಹಿತಿ ಸಂಗ್ರಹಣೆಗೆ ತಂತ್ರಾಂಶ ಅಭಿವೃದ್ಧಿ ಯೋಚಿಸಲಾಗಿದೆ. ಚಿತ್ರದುರ್ಗ ಪಂಚಾಯತಿ ವ್ಯಾಪ್ತಿಯಲ್ಲಿ 4 ಲಕ್ಷ ಕುಟುಂಬಗಳಿವೆ. ಜಿಲ್ಲಾ ಪಂಚಾಯತಿ 189 ಗ್ರಾಮ ಪಂಚಾಯತಿಗಳಿವೆ. 189 ಪಿಡಿಓ, 65 ಗ್ರೇಡ್-1 ಕಾರ್ಯದರ್ಶಿಗಳು, 97 ಗ್ರೇಡ್ -2 ಕಾರ್ಯದರ್ಶಿಗಳು, 100 ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಮೃತ್ ಗ್ರಾಮ ಪಂಚಾಯತಿ ಯೋಜನೆ, ಜಲಜೀವನ್ ಮಿಷನ್, ನರೇಗಾ, ಅಮೃತ ಸರೋವರ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಶಿಕ್ಷಣ ಆರೋಗ್ಯ ಮತ್ತು ಕುಡಿಯುವ ನೀರಿನ ಸರಬರಾಜಿಗೆ ಒತ್ತು ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಜಿ.ಪಂ.ಕಾರ್ಯವೈಖರಿಯಲ್ಲಿ ಕೈಗೊಳಬೇಕಾದ ಸುಧಾರಣೆಗಳ ಬಗ್ಗೆ ಪತ್ರಕರ್ತರಿಂದ ಹಿಮ್ಮಾಯಿತಿಯನ್ನು ಪಡೆದುಕೊಂಡರು. ಜಿಲ್ಲಾ ಪಂಚಾಯಿತಿ ಹಾಗೂ ಪತ್ರಕರ್ತರ ನಡುವಿನ ಸಂವಹನಕ್ಕಾಗಿ ವಾಟ್ಸಪ್ ಗ್ರೂಫ್ ರಚಿಸುವುದಾಗಿ ಸಿಇಓ ಎಂ.ಎಸ್.ದಿವಾಕರ್ ಹೇಳಿದರು.
ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಮಧು.ಡಿ.ಆರ್. ಉಪಸ್ಥಿತರಿದ್ದರು.
ಜಿ.ಪಂ.ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಎಂ.ಎಸ್.ದಿವಾಕರ್ ಧಾರವಾಡ ಕೃಷಿ ವಿ.ವಿಯಿಂದ ಪದವಿ ಹಾಗೂ ಸಸ್ಯ ತಳಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
2002 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗೆ ಆಯ್ಕೆಯಾಗಿ, ಉತ್ತರ ಕನ್ನಡ ಜಿಲ್ಲೆಯ ಸಾಗರದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಕೃಷಿ ಇಲಾಖೆ ವಿಚಕ್ಷಣದಳ ಮುಖ್ಯಸ್ಥರಾಗಿ, ಬೆಳಗಾವಿ ವಿಭಾಗದಲ್ಲಿ ಉಪನಿರ್ದೇಶಕರಾಗಿ, ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದಾರೆ. 2013 ರಲ್ಲಿ ಭಾರತೀಯ ಆಡಳಿತ ಸೇವೆಯ ಆಯ್ಕೆಯಾಗಿದ್ದಾರೆ.