ಬೆಂಗಳೂರು: ಕೆಲ ಹಿರಿಯರ ಸಾವಿನ ಸುದ್ದಿಗಳು ಆಗಾಗ ಓಡಾಡುತ್ತವೆ. ಅವರು ಬದುಕಿರುವಾಗಲೇ ಕಿಡಿಗೇಡಿಗಳು ಇಂತಹ ಸುದ್ದಿ ಹಬ್ಬಿಸುತ್ತಾರೆ. ಸಿನಿಮಾ ಇಂಡಸ್ಟ್ರಿಯ ಹಿರಿಯ ಕಲಾವಿದರಿಗೂ ಇದು ಹೊಸತೇನು ಅಲ್ಲ. ಆದರೆ ಈ ರೀತಿ ಸಾವಿನ ಸುದ್ದಿ ಸುಳ್ಳಾದರೆ ಆಯಸ್ಸು ಜಾಸ್ತಿ ಎನ್ನಲಾಗುತ್ತದೆ. ಇದೀಗ ಸಾಲುಮರದ ತಿಮ್ಮಕ್ಕ ಅವರ ಬಗ್ಗೆಯೂ ಈ ರೀತಿಯ ಸುದ್ದಿ ಹಬ್ಬಿದೆ.
ಸಾಲುಮರದ ತಿಮ್ಮಕ್ಕ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗ ಉಮೇಶ್, ತಿಮ್ಮಕ್ಕ ಅವರ ಜೊತೆಗೆ ಇದ್ದು, ನೋಡಿಕೊಳ್ಳುತ್ತಿದ್ದಾರೆ. ಇಂಥ ಸಮಯದಲ್ಲಿ ಸಾಲುಮರದ ತಿಮ್ಮಕ್ಕ ಇನ್ನಿಲ್ಲ ಎಂಬ ಸುಳ್ಳು ಸುದ್ದಿಯನ್ನು ವೈರಲ್ ಮಾಡಿದ್ದಾರೆ.
ಈ ಸಂಬಂಧ ನಾಗರಾಜು ಹೆತ್ತೂರು ಎನ್ನುವವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ‘ತಿಮ್ಮಕ್ಕ ಅವರಿಗೆ ಏನು ಆಗಿಲ್ಲ. ಆರೋಗ್ಯವಾಗಿಯೇ ಇದ್ದಾರೆ. ಚೇತರಿಕೆ ಕಾಣುತ್ತಿದ್ದಾರೆ. ಮಗ ತಾಯಿಯ ಹಾರೈಕೆ ಮಾಡುತ್ತಿದ್ದಾರೆ. ಊಟ ಕೂಡ ಮಾಡುತ್ತಿದ್ದಾರೆ ಎಂದು ಫೇಸ್ಬುಕ್ ನಲ್ಲಿ, ಕ್ಲಾರಿಟಿ ಕೊಟ್ಟಿದ್ದಾರೆ. ಜೊತೆಗೆ ತಿಮ್ಮಕ್ಕ ಅವರು ಊಟ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸಾಲುಮರದ ತಿಮ್ಮಕ್ಕ ಬೆಂಗಳೂರು ಬಿಟ್ಟು ಬೇಲೂರು ಸೇರಿದ್ದರು. ಅದು ಮಲೆನಾಡು ಆಗಿರುವ ಕಾರಣ, ಶೀತದ ವಾತಾವರಣ ಜಾಸ್ತಿ ಇತ್ತು. ತಿಮ್ಮಕ್ಕ ಅವರಿಗೂ ವಯಸ್ಸಾಗಿದ್ದು, ಆ ಶೀತದ ವಾತಾವರಣ ದೇಹಕ್ಕೆ ಒಗ್ಗಿಲ್ಲ. ಹೀಗಾಗಿ ಉಸಿರಾಟದ ಸಮಸ್ಯೆ ಉಂಟಾಗಿದೆ. ಅಲ್ಲಿಯೇ ಆಸ್ಪತ್ರೆಗೆ ಸೇರಿಸಿದ್ದರು ಸಹ ಚೇತರಿಕೆ ಕಂಡಿರಲಿಲ್ಲ. ಹೀಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸಾಲುಮರದ ತಿಮ್ಮಕ್ಕ ಚೇತರಿಸಿಕೊಳ್ಳುತ್ತಿದ್ದಾರೆ.