ಚಿತ್ರದುರ್ಗ : ಶಾಲೆಗೆ ಕನ್ನ ಹಾಕಿದ ಕಳ್ಳರು : ಲ್ಯಾಪ್ ಟಾಪ್, ಹಾಲಿನ ಪುಡಿ ಸೇರಿ ನಾನಾ ವಸ್ತುಗಳ ಕಳ್ಳತನ

 

ಸುದ್ದಿಒನ್, ಚಿತ್ರದುರ್ಗ (ಜು.08) : ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಬಳಿಯ ನೇರಲಗುಂಟೆ ಗ್ರಾಮದ ಶ್ರೀ ವೆಂಕಟೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ರಾತ್ರಿ ಶಾಲೆಯ ಕಚೇರಿ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ಕೊಠಡಿಯಲ್ಲಿದ್ದ ಎರಡು ಹೊಸ ಲ್ಯಾಪ್ ಟಾಪ್‍ಗಳು, ಒಂದು ಪ್ರಿಂಟರ್, ಒಂದು ಪ್ರೊಜೆಕ್ಟ್‍ರ್, ಚಾರ್ಜರ್‍ಗಳನ್ನು ಕದ್ದೊಯ್ಯಲಾಗಿದೆ.

ಬಿಸಿಯೂಟಕ್ಕಾಗಿ ಸರಕಾರ ನೀಡಿದ್ದ 20 ಕೆ.ಜಿ. ಪ್ಯಾಕೆಟ್‍ಗಳ 5 ಚೀಲಗಳನ್ನು ಒಳಗೊಂಡಂತೆ 100 ಕೆ.ಜಿ. ಹಾಲಿನ ಪುಡಿ, 30 ಕೆ.ಜಿ.ಸಕ್ಕರೆ, ಸಾಂಬರ್ ಪುಡಿ, ಕಾರದ ಪುಡಿ ಚೀಲಗಳು ಕಳ್ಳತನವಾಗಿವೆ. ಕಳೆದ ಒಂದು ವಾರದಲ್ಲಿ ಸರಕಾರ ಕುಕ್ಕರ್, ಮಿಕ್ಸರ್, ಅಳತೆ ಮಾಪನ ಯಂತ್ರಗಳನ್ನು ಶಾಲೆಗೆ ಒದಗಿಸಲಾಗಿತ್ತು. ಇವುಗಳನ್ನು ಕಳ್ಳತನ ಮಾಡಲಾಗಿದೆ.

ಮುಖ್ಯಶಿಕ್ಷಕರ ಕೊಠಡಿ ಮತ್ತು ಸ್ಟಾಫ್ ರೂಂ ಒಂದೇ ವಿಶಾಲವಾದ ಕೊಠಡಿಯಲ್ಲಿದೆ.  ಇಲ್ಲಿ ಪ್ರಮುಖವಾದ ವಸ್ತುಗಳು ಇರಿಸಲಾಗುತ್ತಿದೆ. ಈ ಕೊಠಡಿಗೆ ಇನ್ನರ್ ಲಾಕ್, ಸೇಫ್ಟಿ ಡೋರ್ ಮತ್ತು ಬೀಗ ಹಾಕಲಾಗಿದೆ. ಆದರೆ ಕಳ್ಳಲು ಈ ಮೂರು ರೀತಿಯ ರಕ್ಷಣೆಗಳನ್ನು ಒಡೆದು ಹಾಕಿದ್ದಾರೆ. ಹಾರೆಯಂತಹ ಸಲಕರಣೆಯಿಂದ ಬಾಗಿಲನ್ನು ಒಡೆಯಲಾಗಿದೆ. ಸೇಫ್ಟಿ ಡೋರ್ ಕಿತ್ತು ಹಾಕಲಾಗಿದೆ. ಬಾಗಿಲಿನ ಮುಂಭಾಗದಲ್ಲಿ ಅಳವಡಿಸಿದ್ದ ಕಬ್ಬಿಣದ ಗ್ರಿಲ್ ಹೊಂದಿರುವ ಸೇಫ್ಟಿ ಡೋರ್ ಒಡೆಯಲಾಗಿದೆ. ಶನಿವಾರ ಬೆಳಗಿನ ಶಾಲೆಯ ಸಮಯಕ್ಕೆ ಶಿಕ್ಷಕರು ಬಂದಾಗಿ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.

ಜೂನ್ 21 ರಂದು ಶಾಲೆ ಸ್ಥಾಪನೆಯ 50 ನೇ ವರ್ಷದ ಸಂಭ್ರಮಾಚರಣೆ ಜರುಗಿತ್ತು. ಈ ಹಿನ್ನೆಲೆಯಲ್ಲಿ ದಾನಿಗಳು ಲ್ಯಾಪ್ ಟಾಪ್ ಸೇರಿದಂತೆ ನಾನಾ ಕೊಡುಗೆಗಳನ್ನು ನೀಡಿದ್ದರು. ಈ ಎಲ್ಲ ವಸ್ತುಗಳು ಕಳ್ಳತನವಾಗಿವೆ. ಪಿಎಸ್‍ಐ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಸಾಕ್ಷಗಳನ್ನು ಸಂಗ್ರಹಿಸಿದ್ದಾರೆ. ಮುಖ್ಯಶಿಕ್ಷಕ ಸತ್ಯನಾರಾಯಣ ದೂರು ದಾಖಲಿಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!