ಹುಬ್ಬಳ್ಳಿ: ಕಾಂಗ್ರೆಸ್ ನವರು ತುಷ್ಟಿಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ನಮಗೆ ಟಿಪ್ಪು ಸುಲ್ತಾನನ ಪರ ಎನ್ನುವವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ಬೂಟು ನೆಕ್ಕುತ್ತಿದ್ದರು ಎಂದು ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಬಿ ಕೆ ಹರಿಪ್ರಸಾದ್, ಬಿಜೆಪಿಯವರು ಗೂಡ್ಸೆ ಅನುಯಾಯಿಗಳು ಅವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇವರಿಂದ ನಾವೂ ಕಲಿಯಬೇಕಾಗಿಲ್ಲ. ನಾವೂ ಟಿಪ್ಪು ಸುಲ್ತಾನ್ ಪಾರ್ಟ್ -2 ಅಲ್ಲ. ಬಿಜೆಪಿಗೆ ರೈತರು, ಮಹಿಲಕೆಯರ ಶೋಷಣೆಯ ಬಗ್ಗೆ ಕಾಳಜಿ ಇಲ್ಲ. ಕಾಂಗ್ರೆಸ್, ಸಂವಿಧಾನದ ರಕ್ಷಣೆ ಮಾಡುತ್ತದೆ. ನಮ್ಮದು ಜಾತ್ಯಾತೀತ ರಾಷ್ಟ್ರ. ಎಲ್ಲಾ ಜಾತಿ, ಧರ್ಮಗಳನ್ನು ಕಾಪಾಡಬೇಕು. ಕಾಂಗ್ರೆಸ್ ತುಷ್ಠಿಕರಣ ಮಾಡುತ್ತಿಲ್ಲ. ಬಹುಸಂಖ್ಯಾತರ ತುಷ್ಟಿಕರಣ ಮಾಡುತ್ತಿರುವುದು ಬಿಜೆಪಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಸ್ವತಂತ್ರ ಹೋರಾಟದಲ್ಲಿ ಏಳು ಲಕ್ಷ ಜನ ತ್ಯಾಗ-ಬಲಿದಾನ ಮಾಡಿದ್ದಾರೆ. ಅದರಲ್ಲಿ ಬಿಜೆಪಿಯ ಹಿರಿಯರು ಇದ್ದಾರೆ ಎಂಬುದಕ್ಕೆ ಒಂದೇ ಒಂದು ಹೆಸರು ತಿಳಿಸಲಿ. ಒಂದು ಹೆಸೆಉ ಕೂಡ ಸಿಗಲ್ಲ. ಇವರೆಲ್ಲಾ ಬ್ರಿಟಿಷರ ಬೂಟು ನೆಕ್ಕುತ್ತಿದ್ದವರು. ಇಂತವರು ಕಾಂಗ್ರೆಸ್ ಗೆ ಹೇಳಿಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಇದೆ ವೇಳೆ ಹಿಜಾಬ್ ಆದೇಶ ಹಿಂಪಡೆದುಕೊಳ್ಳುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆಹಾರ, ಉಡುಗೆ ಅವರವರ ವೈಯಕ್ತಿಕ ವಿಚಾರ. ಬಿಜೆಪಿಯವರಿಗೆ ಮಹಿಳೆಯರ ಮೇಲಿನ ಶೋಷಣೆ, ರೈತರ ಸಮಸ್ಯೆ ಬಗ್ಗೆ ಚಿಂತೆ ಇಲ್ಲ. ಹಿಜಾಬ್ ಹಾಗೂ ಬುರ್ಖಾ ನಡುವೆ ಬಹಳಷ್ಟು ವ್ಯತ್ಯಾಸವಿದೆ. ಕೆಲವೊಂದು ಕಾಲೇಜಲ್ಲಿ ಬುರ್ಖಾ ಹಾಕುವುದಕ್ಕೆ ಅನುಮತಿ ಇಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ಮಾತಿಗೆ ಬೆಂಬಲ ನೀಡಿದ್ದಾರೆ.