ಹಾಸನ: ಯಾರ ಹೆಸರನ್ನು ಹೇಳದ ಹೆಚ್ ಡಿ ರೇವಣ್ಣ, ನನ್ನನ್ನು ಮುಗಿಸಲು ಬಂದಿದ್ದರು ಎಂದು ಗಂಭೀರ ವಿಚಾರ ಹೇಳಿದ್ದಾರೆ. ಇಂದು ಹಾಸನದಲ್ಲಿ ಮಾತನಾಡಿದ ಅವರು, ಹಾಡಹಗಲೇ ಜೆಡಿಎಸ್ ಮುಖಂಡ ಅಶ್ವತ್ಥ್ ಅವರ ಕಾರು ಅಡ್ಡಗಟ್ಟಿ ಕೊಲೆ ಯತ್ನ ನಡೆದಿತ್ತು. ಆಗಲೇ ನನ್ನನ್ನೂ ಮುಗಿಸುವುದಕ್ಕೆ ಬಂದಿದ್ದರು ಎಂದಿದ್ದಾರೆ.
ನನ್ನನ್ನು ಮುಗಿಸುವುದಕ್ಕೆ ಕೊಲೆ ಯತ್ನ ನಡೆದಿತ್ತು. ನಾನು ಯಾರ ಬ್ಲ್ಯಾಕ್ ಮೇಲ್ ಗೂ ಹೆದರುವುದಿಲ್ಲ. ಅವರ ಹಿಂದೆ ಯಾರ ಕುಮ್ಮಕ್ಕಿದೆ ಎಂದು ನನಗೆ ಗೊತ್ತು. ನಾನು ಯಾರಿಗೂ ಹೆದರುವುದಿಲ್ಲ. ಬ್ಲ್ಯಾಕ್ ಮೇಲ್ ರಾಜಕೀಯಕ್ಕೆ ಕಾನೂನಿನ ಮೂಲಕವೇ ಉತ್ತರ ಕೊಡುತ್ತೇನೆ. 40 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ನಾನು ಈ ರೀತಿಯ ಬ್ಲ್ಯಾಕ್ ಮೇಲ್ ಗೆಲ್ಲಾ ಹೆದರುವುದಿಲ್ಲ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ಜಮೀನು ಪರಭಾರೆ ಪ್ರಕರಣ ಸಂಬಂಧ ರಾಜಿ ಮಾಡಲು ವಕೀಲ ಪೂರ್ಣಚಂದ್ರ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜ್ ಸೇರಿದಂತೆ ಇತರರು ನನ್ನ ಬಳಿ ಬಂದಿದ್ದರು. ಈ ಎಲ್ಲ ವಿಚಾರಗಳ ಕುರಿತು ಸ್ಪಷ್ಟ ದಾಖಲೆ ನನ್ನ ಬಳಿಯಿದ್ದು ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ. ಪ್ರಜ್ವಲ್ ರೇವಣ್ಣ ಅವರ ಪ್ರಕರಣ, ರೇವಣ್ಣ ಕುಟುಂಬದ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದ್ದು, ಪ್ರತಿ ಚುನಾವಣೆಯಲ್ಲೂ ಸಾರ್ವಜನಿಕವಾಗಿ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ವಕೀಲ ದೇವರಾಜೇಗೌಡ ಇತ್ತಿಚೆಗೆ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದರು. ಇದೀಗ ದೇವರಾಜೇಗೌಡ ಅವರ ಮಾತಿಗೆ ರೇವಣ್ಣ ತಿರುಗೇಟು ನೀಡಿದ್ದಾರೆ.