ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಮಂದಿಗೆ ಕುಡಿಯುವ ನೀರು, ವ್ಯವಸಾಯಕ್ಕಾಗಿ ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದರೆ ತುಂಬಾನೇ ಅನುಕೂಲವಾಗುತ್ತದೆ. ಈಗ ವಾಣಿ ವಿಲಾಸ ಜಲಾಶಯ ಕೋಡಿ ಬೀಳುವ ಸಾಧ್ಯತೆ ತೀರಾ ಹತ್ತಿರವಿದೆ. ಬೆರಳೆಣಿಕೆಯಷ್ಟು ಅಡಿಗಳು ನೀರು ತುಂಬಿದರೆ ಮೂರನೇ ಬಾರಿ ಕೋಡಿ ಬೀಳಲಿದೆ. ಇದರ ಜೊತೆಗೆ ಚಿತ್ರದುರ್ಗದಲ್ಲಿ ಹಲವು ನೀರಿನ ಮೂಲಗಳು ತುಂಬಿದ್ದು, ಸೌಂದರ್ಯ ಹೆಚ್ಚಿಸಿವೆ.
ಕೋಟೆನಾಡಿನಲ್ಲಿ ಜಲಮೂಲಗಳು ಕಡಿಮೆ ಏನು ಇಲ್ಲ. ಪಾಳೇಗಾರರ ಕಾಲದಲ್ಲಿ ಹತ್ತಾರು ಜಲಮೂಲಗಳನ್ನು ನಿರ್ಮಾಣ ಮಾಡಿದ್ದರು. ಈಗ ಅವೆಲ್ಲಕ್ಕೂ ಮರು ಜೀವ ಬಂದಿದೆ. ತುಂಬಿದ ನೀರನ್ನು ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ಕೋಟೆ ಬಳಿಯ ಸಿಹಿನೀರು ಹೊಂಡ, ಕೆಂಚಪ್ಪ ಮಲ್ಲಪ್ಪ ಬಾವಿ, ಸಂತೆ ಹೊಂಡ, ಚಿನ್ನಕ್ಕಿ ಹೊಂಡ, ಕೆಳಗೋಟೆಯಲ್ಲಿನ ಚನ್ನಕೇಶವ ದೇಗುಲ ಬಳಿಯ ಹೊಂಡ, ಗಣಪತಿ ದೇಗುಲದ ಬಳಿ ಇರುವ ಬಾವಿ. ಇವೆಲ್ಲವೂ ನೀರು ಸಂಗ್ರಹದ ಮೂಲಗಳಾಗಿವೆ. ಈ ವರ್ಷ ಉತ್ತಮ ಮಳೆಯಾದ್ದ ಕಾರಣದಿಂದ ನೀರು ತುಂಬಿದೆ.
ಕಳೆದ ವರ್ಷವೂ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿತ್ತು. ಮಳೆಯಿಲ್ಲದೆ ರಾಜ್ಯದ ಜನ ಕಂಗಾಲಾಗಿದ್ದರು. ಇನ್ನು ಜಾನುವಾರುಗಳ ಸ್ಥಿತಿ ಹೇಳತೀರದು. ಆ ರೀತಿಯ ಪರಿಸ್ಥಿತಿ ಉಂಟಾಗಿತ್ತು. ಆದರೆ ಈ ವರ್ಷ ಆ ರೀತಿ ಇಲ್ಲ. ಮಳೆಯ ನೀರು ಎಲ್ಲಾ ಜೀವ ಜಲರಾಶಿಗಳಿಗೂ ಅನುಕೂಲ ಮಾಡಿಕೊಟ್ಟಿದೆ. ನಗರದ ಅಣ್ಣ ಪುಟ್ಟ ಕೆರೆ ಕಟ್ಟೆಗಳು ತುಂಬಿದ್ದು, ಎಲ್ಲದರಲ್ಲೂ ನೀರು, ಸುತ್ತಲೂ ಅಚ್ಚ ಹಸಿರಿನಿಂದ ಕೋಟೆ ನಾಡಿನ ಅಂದ ಹೆಚ್ಚಿಸಿದೆ. ವಾಣಿ ವಿಲಾಸ ಜಲಾಶಯದ ಕೋಡಿ ಬಿದ್ದರೆ ಸ್ಥಳೀಯರು ಇನ್ನಷ್ಟು ಸಂತಸ ಪಡಲಿದ್ದಾರೆ.