ಮೈಸೂರು: ಕೆ ಆರ್ ಕ್ಷೇತ್ರದ ತಂಗುದಾಣದಲ್ಲಿ ಗುಂಬಜ್ ಮಾದರಿಯಲ್ಲಿನ ಬಸ್ ನಿಲ್ದಾಣವಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಬಗ್ಗೆ ಇಂದು ಪ್ರತಾಪ್ ಸಿಂಹ ಹರಿಹಾಯ್ದಿದ್ದು, ಇಂಜಿನಿಯರ್ ಗಳಿಗೆ ಸಮಯ ನೀಡಿದ್ದೇನೆ. ಒಡೆದು ಹಾಕಲಿಲ್ಲವೆಂದರೆ ನಾನೇ ಜೆಸಿಬಿ ತರಿಸಿ ಒಡೆದು ಹಾಕುತ್ತೇವೆ ಎಂದಿದ್ದರು. ಆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ ನೀಡಿದ್ದು, ಪ್ರತಾಪ್ ಸಿಂಹ ಅವರು ಗುಂಬಜ್ ಮಾದರಿಯ ಅದೆಷ್ಟು ತಂಗುದಾಣಗಳನ್ನು ಒಡೆದು ಹಾಕುತ್ತಾರೆ ಎಂಬುದನ್ನು ನೋಡೋಣಾ ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಗುಂಬಜ್ ರೀತಿಯಲ್ಲಿ ಇದ್ದರೆ ಎಲ್ಲದನ್ನು ಒಡೆದು ಹಾಕುತ್ತಾರಾ..? ಯಾರ ಯಾರ ದೃಷ್ಟಿಯಲ್ಲಿ ಏನೇನು ಕಾಣುತ್ತೆ ಯಾರಿಗೆ ಗೊತ್ತು..? ಪ್ರತಾಪ್ ಸಿಂಹ ದೃಷ್ಟಿಯಲ್ಲಿ ಅದು ಯಾವ ರೀತಿ ಕಾಣುತ್ತಿದೆ ಎಂಬುದು ಗೊತ್ತಿಲ್ಲ. ಬಸ್ ನಿಲ್ದಾಣವಾಗಿರುವುದು ಸರ್ಕಾರದ ಹಣದಲ್ಲಿಯೇ. ಆ ಶೆಲ್ಟರ್ ಯಾರು ವಿನ್ಯಾಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಗುಂಬಜ್ ವಿನ್ಯಾಸದ ತಂಗುನಿಲ್ದಾಣವನ್ನು ಒಡೆದು ಹಾಕುವುದಾದರೆ ಅದೆಷ್ಟು ತಂಗುದಾಣವನ್ನು ಒಡೆದು ಹಾಕುತ್ತಾರೆ ಎಂಬುದನ್ನು ನೋಡೋಣಾ ಎಂದಿದ್ದಾರೆ.
ಇನ್ನು ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ತನ್ವೀರ್ ಸೇಠ್ ಹೇಳಿದ್ದರು. ಆ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೂ ಉತ್ತರ ನೀಡಿರುವ ಶಾಸಕ ತನ್ವೀರ್ ಸೇಠ್, ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಪ್ರತಿಮೆ ನಿರ್ಮಾಣ ಮಾಡುವುದು ಖಚಿತವಾಗಿದೆ. ಪ್ರತಿಮೆ ಸ್ಥಾಪನೆ ಮಾಡುವುದು ಮುಸ್ಲಿಂ ಧರ್ಮದಲ್ಲಿ ನಿಷೇಧವಿದ್ದರು, ಇಂದಿನ ಪರಿಸ್ಥಿತಿಗೆ ಅವಶ್ಯಕತೆ ಇದೆ. ಹೀಗಾಗಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುವುದು ಎಂದಿದ್ದಾರೆ.