ಸುದ್ದಿಒನ್, ಚಿತ್ರದುರ್ಗ, ಸೆ. 05: ಎರಡು ದಶಕದ ಹಿಂದೆ ಶಿಕ್ಷಕರು ಎಂದರೇ ಪಾಲಕರ ಪಾಲಿಗೆ ಸಾಕ್ಷಾತ್ ದೇವರು, ಮಕ್ಕಳ ಪಾಲಿಗೆ ಶಿಕ್ಷೆ ಜತೆಗೆ ಶಿಕ್ಷಣ ನೀಡುವ ಗುರು ಆಗಿದ್ದರು ಎಂದು ಮಾಜಿ ಸಚಿವ ಎಚ್.ಆಂಜನೇಯ ಸ್ಮರಿಸಿದರು.
ಸೀಬಾರ ಸಮೀಪದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರನ್ನು ಗೌರವಿಸಿ ಮಾತನಾಡಿದರು.
ಒಬ್ಬ ಶಿಕ್ಷಕ ಒಂದು ಊರು, ಬಡಾವಣೆ, ಹಟ್ಟಿಯ ಜನರ ಕಣ್ಣಿಗೆ ಕಾಣುವ ದೇವರಾಗಿದ್ದರು. ಶಾಲೆಗೆ ಮಕ್ಕಳನ್ನು ದಾಖಲಿಸುತ್ತಿದ್ದ ಪಾಲಕರು, ಅಂದೇ ಶಿಕ್ಷಕರ ಕೈಗೆ ಒಂದು ಬೆತ್ತ ಕೊಟ್ಟು ನಮ್ಮ ಮಕ್ಕಳಿಗೆ ಒದ್ದು ಬುದ್ಧಿ ಕಲಿಸಿ ಎಂದು ಕೋರುತ್ತಿದ್ದರು ಎಂದರು.
ಬಸ್ಕಿ ಹೊಡೆಸುವುದು ಸೇರಿ ವಿವಿಧ ರೀತಿ ದಂಡಿಸುವ ಮೂಲಕ ಮಕ್ಕಳನ್ನು ಸರಿದಾರಿಗೆ ತರುತ್ತಿದ್ದರು. ಮಾಸ್ಟರ್ ಒದ್ದ ವಿಷಯ ಮನೆಗೆ ಬಂದು ಹೇಳಿದರೆ, ಮನೆಯಲ್ಲೂ ಒದೆ ಬೀಳುತ್ತಿದ್ದವು. ಜತೆಗೆ ಪಾಲಕರು ಶಾಲೆಗೆ ಬಂದು ಇನ್ನಷ್ಟು ಒಡೆದು ಅಕ್ಷರ ಕಲಿಸಿ ಸ್ವಾಮಿ ಎಂದು ಶಿಕ್ಷಕರಲ್ಲಿ ವಿನಂತಿಕೊಳ್ಳುತ್ತಿದ್ದರು ಎಂದು ಹೇಳಿದರು.
ಆದರೆ, ಇಂದು ಸಿಟ್ಟಿನಲ್ಲಿ ಮಕ್ಕಳಿಗೆ ಸಣ್ಣ ಒದೆ ಕೊಟ್ಟರೇ ಜಾಮೀನು ರಹಿತ ಬಂಧನ ಭೀತಿ ಶಿಕ್ಷಕರು ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕೆ ಈಗಿನ ಶಿಕ್ಷಕರು ತರಲೆ ಮಾಡುವ ಮಕ್ಕಳಿಗೆ ಮಾತಿನಲ್ಲಷ್ಟೇ ಬುದ್ಧಿ ಹೇಳುತ್ತಾರೆ, ಕೈ ಎತ್ತು ಒದೆಯುವುದನ್ನೇ ಮರೆತಿದ್ದಾರೆ. ಪರಿಣಾಮ ಬಹಳಷ್ಟು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ವಿಷಾದಿಸಿದರು.
ಭವಿಷ್ಯದ ಪ್ರಜೆಗಳನ್ನು ನಿರ್ಮಾಣ ಮಾಡುವ ನಿರ್ಮಾತೃರು ಶಿಕ್ಷಕರು. ದೇಶದ ನಿರ್ಮಾಣದಲ್ಲಿ ಮಹತ್ತರ ಪಾತ್ರ ಹೊಂದಿದ್ದು, ವೈಜ್ಞಾನಿಕ ಚಿಂತನೆಗಳನ್ನು ಮಕ್ಕಳಿಗೆ ಬೋಧಿಸುವ ಜತೆಗೆ ಅವರ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.
ದೇಶಕ್ಕೆ ಅತ್ಯುತ್ತಮ ಸಂವಿಧಾನ ಕೊಟ್ಟಂತಹ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣದ ಮಹತ್ವ ಕುರಿತು ಹೇಳಿದ್ದರು. ಆದ್ದರಿಂದ ಕಡ್ಡಾಯ ಶಿಕ್ಷಣ ಅಗತ್ಯ ಎಂದು ಹೇಳಿದ್ದರು. ಜತೆಗೆ ಯಾವ ಊರಲ್ಲಿ ಶಾಲೆಗಳ ಗಂಟೆ ಶಬ್ಧ ಕೇಳಿದರೆ ಅಲ್ಲಿ ಜ್ಞಾನವಂತರು ಇರುತ್ತಾರೆ, ದೇಗುಲಗಳಲ್ಲಿನ ಗಂಟೆಗಳು ಅಜ್ಞಾನದ ಕೂಪಕ್ಕೆ ತಳ್ಳುತ್ತವೆ ಎಂಬ ಅವರ ಮಾತು ಕಟು ಸತ್ಯ ಎಂದು ಹೇಳಿದರು.
ಆದರೆ, ಮಹನೀಯರ ಚಿಂತನೆ ಅರಿತುಕೊಳ್ಳುವಲ್ಲಿ ವಿಫಲರಾಗಿರುವ ನಮ್ಮ ಜನರು ಈಗಲೂ ಬಡತನ ಹೊದ್ದು ಮಲಗಿರುವ ಹಳ್ಳಿಗಳಲ್ಲೂ ಐದತ್ತು ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಕಟ್ಟಲು ಶ್ರಮಿಸುತ್ತಾರೆ. ಅದೇ ಊರಲ್ಲಿ ಶಾಲೆ ಬೀಳುವ ಸ್ಥಿತಿ ಇರುತ್ತದೆ. ಅದರ ಕಡೆ ಗಮನಹರಿಸುವುದಿಲ್ಲ. ಪರಿಣಾಮ ಕಾನ್ವೆಂಟ್ ಸಂಸ್ಕೃತಿ ಹೆಚ್ಚಾಗಿ, ಮಕ್ಕಳು ಯಾಂತ್ರಿಕವಾಗುತ್ತಿದ್ದಾರೆ ಎಂದು ಬೇಸರಿಸಿದರು.
ರಾಜಕಾರಣಿಗಳು, ಅಧಿಕಾರಿಗಳ ಬಳಿ ಬಂದು ನಮ್ಮೂರಿನಲ್ಲಿ ದೇವಸ್ಥಾನ ಕಟ್ಟುತ್ತೇವೆ ಅನುದಾನ ಕೊಡಿ ಎಂದು ಕೇಳುವ ಜನರು, ನಮ್ಮೂರಿನ ಶಾಲೆ ಅಭಿವೃದ್ಧಿಗೆ ಒತ್ತಡವೇ ತರುವುದಿಲ್ಲ. ಇಂತಹ ಮನಸ್ಥಿತಿಯಿಂದ ಹೊರಬರಬೇಕು. ನಮಗೆ ನಮ್ಮ ಮಕ್ಕಳು ಕಲಿಯುವ ಶಾಲೆಗಳೇ ನಿಜವಾದ ದೇಗುಲಗಳು ಎಂಬ ಭಾವನೆ ಬರಬೇಕು. ಆಗ ಮಾತ್ರ ಮಕ್ಕಳ ಭವಿಷ್ಯದ ಜತೆಗೆ ದೇಶ ಅಭಿವೃದ್ಧಿ ಕಾಣಲಿದೆ ಎಂದರು.
ಚಂದ್ರನ ಅಂಗಳಕ್ಕೆ ಹೋಗಿ ಜಗತ್ತು ನಮ್ಮ ಕಡೆ ಅಚ್ಚರಿಯಿಂದ ನೋಡುವಂತೆ ವಿಜ್ಞಾನಿಗಳು ಸಾಧನೆ ಮಾಡಿದ್ದಾರೆ. ಇಂತಹ ತಂತ್ರಜ್ಞಾನ ಯುಗದಲ್ಲೂ ನಾವಿನ್ನೂ ಮಸೀದಿ, ಮಂದಿರ, ಚರ್ಚ್ ಎಂದು ಹೊಡೆದಾಡಿಕೊಳ್ಳುತ್ತಿದ್ದೇವೆ. ನಾವೆಲ್ಲರೂ ಸೇರಿ ದೇಶದ ಬುನಾದಿ ಆಗಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಡಬೇಕು. ಆಗ ಮಾತ್ರ ನಾವು ನಮ್ಮ ಧರ್ಮ ಪಾಲಿಸಿದಂತೆ ಎಂದು ಹೇಳಿದರು.
ಶಿಕ್ಷಕ ಗಂಜಿಗಟ್ಟೆ ನರಸಿಂಹಮೂರ್ತಿ ಸೇರಿದಂತೆ ಅನೇಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಮುಖಂಡರಾದ ಧನಂಜಯ್ಯ, ಅಳಗವಾಡಿ ಕೋಟಿ, ಹನುಮಂತಪ್ಪ, ರಂಗಸ್ವಾಮಿ ಇದ್ದರು.