ಮಡಿಕೇರಿ: ಕುಶಾಲನಗರಕ್ಕೆ ಭೇಟಿ ನೀಡೊರುವ ಪ್ರಮೋದ್ ಮುತಾಲಿಕ್, ಹಿಂದೂ ಸಂಘಟನೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮೈಸೂರು ಜಿಲ್ಲೆಯ ಕೌಲಂದೆಯಲ್ಲಿ ರಂಜಾನ್ ಮೆರವಣಿಗೆ ಸಂದರ್ಭದಲ್ಲಿ ಛೋಟಾ ಪಾಕಿಸ್ತಾನ್ ಎಂಬ ಘೋಷಣೆ ಕೂಗಿದ್ದಾರೆ. ಈ ಘೋಷಣೆಯಿಂದಲೇ ತಿಳಿಯುತ್ತದೆ, ಇನ್ನು ದೇಶದ್ರೋಹ ಶಕ್ತಿ ಇನ್ನೂ ಜೀವಂತವಾಗಿದೆ ಎಂಬುದು. ಇದರಿಂದ ಇನ್ನೂ 100 ಪಟ್ಟು ಹಿಂದೂ ಸಮಾಜವನ್ನು ಜಾಗೃತಿಗೊಳಿಸುವ ಅಗತ್ಯವಿದೆ ಎಂದಿದ್ದಾರೆ.
ಕುಶಾಲನಗರದ ಖಾಸಗಿ ಸಭಾಂಗಣದಲ್ಲಿ ಮಾತನಾಡಿದ ಮುತಾಲಿಕ್, ಹಿಜಾಬ್ ಪ್ರಕರಣದಲ್ಲಿ ರಾಜ್ಯದಲ್ಲಿ ಚಿಂತನ, ಮಂಥನ ಉಂಟಾಗಿದೆ. ಇದರಿಂದ ಹಿಂದೂ ಸಮಾಜ ಜಾಗೃತವಾಗುತ್ತಿದೆ. ಇಲ್ಲಿವರೆಗೆ ಎಡವಿರುವ ಸಮಾಜ ಈಗ ಸುಧಾರಿಸಿಕೊಳ್ಳುತ್ತಿದೆ. ಮುಂದೆ ವಕ್ಫ್ ಬೋರ್ಡ್ ಗೋಲ್ಮಾಲ್, ಆಜಾನ್ ಮೈಕ್ ಕಿರಿಕಿರಿ, ಗೋಹತ್ಯೆ, ಬೈಬಲ್ ಬೋಧನೆ ವಿರೋಧಿ ಹೋರಾಟ ಮತ್ತು ಮತಾಂತರ ನಿಷೇಧ ಕಾಯ್ದೆ ಜಾರಿ ಒತ್ತಾಯಿಸಿ ಹೋರಾಟ ಮುಂದುವರೆಯಲಾಗುತ್ತದೆ ಎಂದು ಮುತಾಲಿಕ್ ಹೇಳಿದ್ದಾರೆ.
ಇನ್ನು ಆಜಾನ್ ಉಂಟಾಗುವ ಶಬ್ಧ ಮಾಲಿನ್ಯ ತಡೆಯುವ ವಿಚಾರವಾಗಿ ಇದೇ ತಿಂಗಳ 9ರಂದು ರಾಜ್ಯದ ಒಂದು ಸಾವಿರ ದೇವಾಲಯದಲ್ಲಿ ಬೆಳಗ್ಗೆ 5 ಗಂಟೆಯಿಂದ ಹಿಂದೂ ಸಂಘಟನೆಗಳಿಂದ ಸುಪ್ರಭಾತ, ಓಂಕಾರ, ಶಿವಜಪ, ಹನುಮಾನ್ ಚಾಲೀಸ ಪಠಿಸಲಾಗುತ್ತದೆ. ರಾಜಕೀಯ ಸ್ವಾರ್ಥದಿಂದ ಹಿಂದೂ ಕಾರ್ಯಕರ್ತರ ಕಗ್ಗೊಲೆಯಾಗುತ್ತಿದೆ. ಬಿಜೆಪಿ ಸರ್ಕಾರವಿದ್ದರೂ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳನ್ನು ಬ್ಯಾನ್ ಮಾಡದೆ ಇರುವುದರ ಹಿಂದೆ ಹೀನ ರಾಜಕಾರಣವಿದೆ ಎಂದಿದ್ದಾರೆ.