ಶಿವಮೊಗ್ಗ; ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಇನ್ನಿಲ್ಲದ ಸದ್ದು ಮಾಡ್ತಾ ಇದೆ. ಸದನದಲ್ಲೂ ಅದೇ ಚರ್ಚೆ, ಹೊರಗೂ ಅದೇ ಚರ್ಚೆ. ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ ಅವರು ಸದಾ ಕಾಲ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಹೌಹಾರುತ್ತಿದ್ದರು. ಹೀಗಾಗಿ ರೇಣುಕಾಚಾರ್ಯ ಅವರು ಯತ್ನಾಳ್ ಗೆ ಟೀಕೆ ಮಾಡುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಶಾಂತವಾಗಿದ್ದರು. ಇದೀಗ ಹನಿಟ್ರ್ಯಾಪ್ ವಿಚಾರಕ್ಕೆ ಮತ್ತೆ ರೊಚ್ಚಿಗೆದ್ದಿದ್ದಾರೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು, ಅಧಿವೇಶನದಲ್ಲಿ ಪ್ರಭಾವಿ ಸಚಿವ, ಮುಖ್ಯಮಂತ್ರಿ ಪಕ್ಕದಲ್ಲಿ ಇರುವಂತವರು, ಯತ್ನಾಳ್ ಗೆ ಒಂದು ಚೀಟಿ ಕಳುಹಿಸಿದ್ರು. ಆ ಚೀಟಿ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಚೀಟಿಯನ್ನ ಯಾಕೆ ತಗೊಂಡ್ರಿ..? ಸದನದಲ್ಲಿ ಏನು ಪ್ರಸ್ತಾಪ ಮಾಡಿದ್ರಿ..? ಅಂದ್ರೆ ಆಡಳಿತ ಪಕ್ಷಕ್ಕೆ ನೀವೂ ಏಜೆಂಟ್ ಆಗಿ ಕೆಲಸ ಮಾಡ್ತಾ ಇದ್ದೀರಾ..?

ಮುಖ್ಯಮಂತ್ರಿಗಳ ಆಮಿಷಕ್ಕೆ ಒಳಗಾಗಿ, ಪ್ರತಿಪಕ್ಷದ ಶಾಸಕನಾಗಿ ಕೆಲಸ ಮಾಡದೆ ಆ ಚೀಟಿ ಬಗ್ಗೆ ಪ್ರಸ್ತಾಪ ಮಾಡ್ತೀರ ಅಂದ್ರೆ ನೀವೂ ಆಡಳಿತ ಪಕ್ಷದ ಶಾಸಕರಾ..? ಒಂದು ದಿವಸಾನು ಆ ಮನುಷ್ಯ ಆಡಳಿತ ಪಕ್ಷದ ವೈಫಲ್ಯವನ್ನು, ಭ್ರಷ್ಟಾಚಾರವನ್ನು ಮಾತಾಡಿಲ್ಲ. ಹಾಗಾಗಿ ಅಡ್ಜೆಸ್ಟ್ಮೆಂಟ್ ಪಾರ್ಟಿಗೆ ಸೀದಾ. ಯಾವ ಹಿಂದುತ್ವನು ಇಲ್ಲ ಏನಿಲ್ಲ. ಎಲ್ಲಾ ನಕಲಿ ಹಿಂದುತ್ವ ಎಂದು ರೇಣುಕಾಚಾರ್ಯ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಗುಡುಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಹನಿಟ್ರ್ಯಾಪ್ ಬಗ್ಗೆ ಅದರಲ್ಲೂ ಆಡಳಿತ ಪಕ್ಷ ನೀಡಿದ ಚೀಟಿ ಬಗ್ಗೆ ಪ್ರಸ್ತಾಪಿಸಿದ್ದಾರೆ.


