ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇಲ್ಲ : ಕೃಷಿ ಸಚಿವ ಬಿ.ಸಿ.ಪಾಟೀಲ್

suddionenews
2 Min Read

ಚಿತ್ರದುರ್ಗ, (ಮೇ.20) : ಈ ವರ್ಷದ ಏಪ್ರಿಲ್ ಆರಂಭದಲ್ಲಿ 5,94,773 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇತ್ತು. ಇದುವರೆಗೆ 5,23,746 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ರಾಜ್ಯಕ್ಕೆ ಬಂದಿದ್ದು, ಒಟ್ಟು 11,18,519 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತನು ಇದೆ. ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಿಲ್ಲೆಯ ಮುಂಗಾರು ಹಂಗಾಮಿನ ಬಿತ್ತನೆ ಸಿದ್ಧತೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ಮಳೆಯಿಂದಾಗಿ 240 ಹೆಕ್ಟೇರ್ ತೋಟಗಾರಿಕೆ ಹಾಗೂ 40 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.  40 ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆಹಾನಿಯಾಗಿದೆ. ಒಟ್ಟು 37 ಲಕ್ಷ ರೂಪಾಯಿ ನಷ್ಟವಾಗಿದೆ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸರ್ವೇ ಕಾರ್ಯಕೈಗೊಂಡು ವರದಿ ನೀಡಿದ್ದಾರೆ. ಬೆಳೆ ಹಾನಿಯಾದವರಿಗೆ ಪರಿಹಾರ ನೀಡಲಾಗುವುದು. ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಇದೆ. ಅಕ್ರಮವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಠಿಸಲು ಯಾರಾದರು ಪ್ರಯತ್ನ ಮಾಡಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಕೇಂದ್ರ ಸರ್ಕಾರ ರಸಗೊಬ್ಬರ ಖರೀದಿಗೆ ದೇಶಾದ್ಯಂತ 2,39,000 ಕೋಟಿ ರೂಪಾಯಿ ರಿಯಾಯಿತಿ ನೀಡಿದೆ. 50ಕೆ.ಜಿ. ಚೀಲದ ಗೊಬ್ಬರಗಳ ಮೇಲೆ ಬಹಳ ದೊಡ್ಡ ಪ್ರಮಾಣದಲ್ಲಿ ರಿಯಾಯತಿ ನೀಡಲಾಗುತ್ತಿದೆ.  ಡಿ.ಎ.ಪಿ. ಗೊಬ್ಬರದ ಮಾರುಕಟ್ಟೆ ಬೆಲೆ ರೂ.3851. ಇದರಲ್ಲಿ ಕೇಂದ್ರ ಸರ್ಕಾರ ರೂ.2501 ರಿಯಾಯಿತಿ ನೀಡಿದೆ. ರೈತರರು ಖರೀದಿಸುವ ದರ ರೂ.1350.  ಎಂ.ಓಪಿ. ಗೊಬ್ಬರದ ಮಾರುಕಟ್ಟೆ ಬೆಲೆ ರೂ.2459. ಕೇಂದ್ರ ಸರ್ಕಾರ ರೂ.759 ರಿಯಾಯಿತಿ ನೀಡಿದೆ. ರೈತರರು ಖರೀದಿಸುವ ದರ ರೂ. 1700. ಯೂರಿಯಾ ಗೊಬ್ಬರದ ಮಾರುಕಟ್ಟೆ ಬೆಲೆ ರೂ.1666. ಕೇಂದ್ರ ಸರ್ಕಾರ ರೂ.1400 ರಿಯಾಯಿತಿ ನೀಡಿದೆ. ರೈತರರು ಖರೀದಿಸುವ ದರ ರೂ.266.  ಎನ್.ಪಿ.ಕೆ. ಕಾಪ್ಲೇಕ್ಸ್ನ ಗೊಬ್ಬರದ ಮಾರುಕಟ್ಟೆ ಬೆಲೆ ರೂ.3204. ಕೇಂದ್ರ ಸರ್ಕಾರ ರೂ.1734 ರಿಯಾಯಿತಿ ನೀಡಿದೆ. ರೈತರರು ಖರೀದಿಸುವ ದರ ರೂ. 1470 ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಚಂದ್ರಪ್ಪ, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿ.ಪಂ.ಸಿಇಓ ಡಾ.ಕೆ.ನಂದಿನಿದೇವಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್.ಪಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ.ಜಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *