ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ, ಕಾನೂನು ಬಲ್ಲವನಿಗೆ ಸಮಸ್ಯೆ ಇಲ್ಲ : ನ್ಯಾಯಾಧೀಶೆ ಮನಗೂಳಿ ಪ್ರೇಮಾವತಿ ಎಂ.

3 Min Read

 

ಚಿತ್ರದುರ್ಗ,(ಜು.19) : ಪ್ರತಿಯೊಬ್ಬ ಸರ್ಕಾರಿ ನೌಕರರು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಕುರಿತು ಕಾನೂನು ತಿಳುವಳಿಕೆ ಹೊಂದುವುದು ಅಗತ್ಯವಾಗಿದೆ. ಒತ್ತಡ ಆಮಿಷಗಳಿಗೆ ಒಳಗಾಗಿ ಕಾನೂನು ಉಲ್ಲಂಘನೆ ಮಾಡಿದರೆ ತೊಂದರೆ ತಪ್ಪದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮನಗೂಳಿ ಪ್ರೇಮಾವತಿ ಎಂ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಪಂಚಾಯಿತಿ, ಕಂದಾಯ ಇಲಾಖೆ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ರ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ. ಇದೇ ರೀತಿ ಕಾನೂನು ಬಲ್ಲವನಿಗೆ ಯಾವುದೇ ಸಮಸ್ಯೆ ಇಲ್ಲ. ಯಾರು ಕಾನೂನು ಗೌರವಿಸಿ ಪಾಲನೆ ಮಾಡುವವರೋ ಅವರಿಗೆ ಕಾನೂನು ಸದಾ ರಕ್ಷಣೆ ನೀಡುತ್ತದೆ. ಲೋಕಾಯುಕ್ತ ಒಂದು ಸ್ವತಂತ್ರ ಸಂಸ್ಥೆ, ನ್ಯಾಯಮೂರ್ತಿಗಳಾದ ಸಂತೋಷ್ ಹೆಗಡೆ, ವೆಂಕಟಾಲಯ್ಯನವರು ಕರ್ನಾಟಕ ಲೋಕಾಯುಕ್ತದ ಹೆಸರು ಜನಮಾನಸದಲ್ಲಿ ಉಳಿಯುವಂತಹ ಕಾರ್ಯ ಮಾಡಿದ್ದಾರೆ.

ಸರ್ಕಾರಿ ನೌಕರರು ಲೋಕಾಯುಕ್ತ ಕಾರ್ಯಾಚರಣೆ ಬಗ್ಗೆ ಹಾಗೂ ಅದರ ಕಾರ್ಯ ವೈಖರಿ ಕುರಿತು ತಿಳಿದುಕೊಳ್ಳಬೇಕು. ಕಾನೂನು ಉಲ್ಲಂಘನೆ ಮಾಡಿದರೆ ಯಾವ ರೀತಿಯ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬುದನ್ನು ತಿಳಿದಿರಬೇಕು. ಲೋಕಾಯುಕ್ತ ಯಾವ ರೀತಿಯ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುತ್ತದೆ. ಯಾವ ರೀತಿ ಪರಿಶೀಲನೆ ಮಾಡುತ್ತದೆ. ಅದರ ಪರಿಣಾಮವೇನು ಎಂಬುದನ್ನು ತಿಳಿದು ಕರ್ತವ್ಯವನ್ನು ನಿರ್ವಹಿಸಿಬೇಕು. ಕಾನೂನನ್ನು ಪರಿಪಾಲಿಸಿ ಉತ್ತಮ ಸೇವೆಯನ್ನು ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಯಕ್ರಮ ಅಧ್ಯಕ್ಷೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಕಾನೂನಿನ ಚೌಕಟ್ಟು ಮೀರಿ ಕಾರ್ಯನಿರ್ವಹಿಸಬೇಡಿ. ಸಾರ್ವಜನಿಕರ ಸೇವೆಯನ್ನು ನಿಷ್ಪಕ್ಷಪಾತವಾಗಿ ಮಾಡಿ. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮನಗೂಳಿ ಪ್ರೇಮಾವತಿ ಎಂ. ಅವರು ಕಂದಾಯ ಇಲಾಖೆ ವತಿಯಿಂದ ಬೆಳೆ ಸರ್ವೆ ಕೈಗೊಳ್ಳುವ ಸಮಯದಲ್ಲಿ ಗಾಂಜಾ ಬೆಳೆಯುವ ಬಗ್ಗೆ ನಿಗಾವಹಿಸುವಂತೆ ತಿಳಿಸಿದ್ದಾರೆ.

ಗ್ರಾಮಲೆಕ್ಕಾಧಿಕಾರಿಗಳು ಬೆಳೆ ಸರ್ವೇ ಸಂದರ್ಭದಲ್ಲಿ ರೈತರ ಹೊಲಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಈ ಕುರಿತು ನಿಗಾ ವಹಿಸಿದರೆ ಗಾಂಜಾ ಬೆಳೆಯುವುದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಗಾಂಜಾ ಬೆಳೆಯುವುದು ನಿಂತರೆ, ಗಾಂಜಾ ಮಾರಾಟದ ಸರಪಳಿ ತುಂಡಾಗುತ್ತದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಧೀಶರಾದ ಗಿರೀಶ್.ಬಿ.ಕೆ ಮಾತನಾಡಿ, ಜನರು ಸಮಸ್ಯೆಗಳನ್ನು ಹೊತ್ತು, ಲೋಕಾಯುಕ್ತ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಬರದ ಹಾಗೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಕಾಯ್ದೆ ಕಾನೂನುಗಳ ಭಯದಿಂದ ಕಾರ್ಯನಿರ್ವಹಿಸದೆ, ಸ್ವ ಇಚ್ಛೆಯಿಂದ ಜನರ ಕೆಲಸ ಮಾಡಿದರೆ, ಜನರೇ ನಿಮ್ಮನ್ನು ಗುರುತಿಸುತ್ತಾರೆ. ಸರ್ಕಾರಿ ನೌಕರರು ಕಾಯ್ದೆ ಉಲಂಘನೆ ಮಾಡಿದರೆ ಕಠಿಣ ಪರಿಸ್ಥಿತಿಗಳಿಗೆ ಸಿಲುಕಬೇಕಾಗುತ್ತದೆ ಎಂಬುದನ್ನು ಅರಿತು ಕೆಲಸ ನಿರ್ವಹಿಸಬೇಕು ಎಂದರು.

ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಶಿವುಯಾದವ್ ಮಾತನಾಡಿ, ಕಾನೂನುಗಳು ಈ ನೆಲ ಜಲದ ರಕ್ಷಣೆಗಾಗಿ ಮಾಡಲಾಗಿದೆ. ಕಾನೂನುಗಳನ್ನು ಪಾಲನೆ ಮಾಡಿದರೆ ಕಾನೂನು ನಿಮ್ಮನ್ನು ರಕ್ಷಿಸುತ್ತದೆ. ಸರ್ಕಾರಿ ನೌಕರರು ಕಾನೂನಿನ ಅರಿವಿದ್ದು, ಸಹ ತಪ್ಪು ಮಾಡುವ ಸಂಭವಗಳಿವೆ. ನಗರದ ಸಮೀಪ ಇರುವ ಪಂಚಾಯಿತಿಗಳಲ್ಲಿ ಜಮೀನು, ದಾಖಲೆ, ಇ-ಸ್ವತ್ತು ಪಡೆಯಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಣದ ಬೇಡಿಕೆ ಇಡುವುದು ಕಂಡುಬಂದಿದೆ. ಈ ತರಹದ ಅಪವಾದಗಳಿಗೆ ವಿರುದ್ದವಾಗಿ ಪ್ರಾಮಾಣಿಕವಾಗಿ ಸಾರ್ವಜನಿಕರ ಸೇವೆ ಮಾಡಬೇಕು. ಮೇಲಾಧಿಕಾರಿಗಳು, ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಕಾನೂನಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಬೇಡಿ. ಇದರಿಂದ ನಿಮಗೆ ತೊಂದರೆ ಉಂಟಾಗುತ್ತದೆ.

ಅಕ್ರಮಗಳು ಬೆಳಕಿಗೆ ಬಂದಾಗ ಮೊದಲು ಪಿ.ಡಿ.ಓಗಳೇ ಹೊಣೆಗಾರರಾಗುತ್ತೀರಾ. ಆತ್ಮಸಾಕ್ಷಿಗೆ ಬದ್ಧವಾಗಿ ಕೆಲಸ ನಿರ್ವಹಿಸಿ. ಜನರು, ಜನಪ್ರತಿನಿಧಿಗಳ ನಡುವೆ ಕೆಲಸ ಮಾಡುವ ಅವಕಾಶ ನಿಮಗಿದೆ. ಕಾನೂನಿಗೆ ಬದ್ಧರಾಗಿ ಕೆಲಸ ನಿರ್ವಹಿಸಿದರೆ ಯಾವುದೇ ತೊಂದರೆ ಬರುವುದಿಲ್ಲ. ಗ್ರಾಮೀಣ ಜನರಿಗೆ ಕೆಲಸ ನೀಡುವ ದೃಷ್ಠಿಯಿಂದ ನರೇಗಾ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ನರೇಗಾದಡಿ ನೀಡಲಾಗಿರುವ ಜಾಬ್ ಕಾರ್ಡುಗಳು ಯಾವುದೋ ಗುತ್ತಿಗೆದಾರರ ಬಳಿಯಿವೆ.ಇಂತಹ ಅಕ್ರಮಗಳಿಗೆ ಪಿಡಿಓಗಳು ಅವಕಾಶ ನೀಡಬಾರದು. ಕಾನೂನಿಗೆ ಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಎನ್.ಮೃತ್ಯುಂಜಯ ಅವರು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕುರಿತು ಉಪನ್ಯಾಸ ನೀಡಿದರು.

ಚಿತ್ರದುರ್ಗ ಜಿಲ್ಲಾ ಲೋಕಾಯುಕ್ತ ಎಸ್.ಪಿ. ಎನ್.ವಾಸುದೇವರಾಮ, ಜಿ.ಪಂ.ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಸಿ.ದಯಾನಂದ, ಕಾರ್ಯದರ್ಶಿ ಎಂ.ಮೂರ್ತಿ, ಲೋಕಾಯುಕ್ತ ವಿಶೇಷ ಅಭಿಯೋಜಕ ಬಿ.ಮಲ್ಲೇಶಪ್ಪ, ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಜಿ.ಮಂಜುನಾಥ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *