ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಗೆ ವೈಲ್ಡ್ ಎಂಟ್ರಿ ಮೂಲಕ ಹೋಗಿರುವ ಹನುಮಂತು ಮನೆಯೊಳಗೆ ಇರುವ ಎಲ್ಲರಿಗೂ ಶಾಕ್ ನೀಡುತ್ತಿದ್ದಾರೆ. ಟಾಸ್ಕ್ ಅಂತು ಸಖತ್ತಾಗಿನೇ ಆಡ್ತಾ ಇದ್ದಾರೆ. ಹನುಮಂತು ಚುನಾವಣಾರಾಯಬಾರಿ ಕೂಡ. ಕಳೆದ ವಿಧಾನಸಭಾ ಚುನಾವಣೆಯಿಂದ ರಾಯಬಾರಿಯಾಗಿದ್ದು, ಎಲ್ಲರು ತಪ್ಪದೆ ಮತ ಹಾಕಿ ಎಂದೇ ಹೇಳುತ್ತಿದ್ದರು. ಆದರೆ ಈ ಬಾರಿ ತಮ್ಮದೇ ಕ್ಷೇತ್ರದ ಉಪಚುನಾವಣೆಯಲ್ಲಿ ಹನುಮಂತು ಮತ ಹಾಕಿಲ್ಲ. ಚುನಾವಣಾ ರಾಯಭಾರಿಯೇ ವೋಟ್ ಮಿಸ್ ಮಾಡಿದ್ದಾರೆ.
ಹನುಮಂತು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಚಿಲ್ನೂರ್ ಬಡ್ನಿ ತಾಂಡಾದ ನಿವಾಸಿ. ಇವರ ಮತದಾನದ ಹಕ್ಕು ಚಿಲ್ಲೂರ ಬಡ್ನಿ ತಾಂಡಾದ ಸರ್ಕಾರಿ ಶಾಲೆಯ ಮತಗಟ್ಟೆ 117ರಲ್ಲಿದೆ. ಹನುಮಂತು ಇಲ್ಲದೆ ಇದ್ದರು ಪೋಷಕರು ಮತದಾನವನ್ನು ಮರೆತಿಲ್ಲ. ತಂದೆ ಮೇಘಪ್ಪ ಹಾಗೂ ತಾಯಿ ಶೀಲವ್ವ ಮತದಾನ ಮಾಡಿದ್ದಾರೆ. ‘ಮಗ ಬಿಗ್ ಬಾಸ್ ಮನೇಲಿದ್ದಾನಾ. ಅದಕ್ಕೆ ಅವಂಗೆ ಬರುವುದಕ್ಕೆ ಆಗಿಲ್ಲ. ನಮಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ಅದಕ್ಕ ನಾವಷ್ಟೆ ಬಂದು ಮತದಾನ ಮಾಡಿದ್ದೀವಿ’ ಎಂದಿದ್ದಾರೆ.
ಹನುಮಂತು ಹಾಡು ಹಾಡುವುದರಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಕಂಡ ವಿಚಾರಕ್ಕೆ ಪದ ಕಟ್ಟಿ ಹಾಡುವುದೆಂದರೆ ಇನ್ನಿಲ್ಲದ ಕ್ರೇಜು. ಸ್ವಲ್ಪ ಸಮಯ ಕೊಟ್ಟರೆ ಸಾಕು ಅಲ್ಲಿಯೇ ಹಾಡು ಕಟ್ಟಿ ಬಿಡುತ್ತಾರೆ. ಅಮನತ ಚಾಲಾಕಿ ಹನುಮಂತು. ಬಿಗ್ ಬಾಸ್ ಮನೆಯಲ್ಲಿ ತಮ್ಮ ಮುಗ್ಧತೆಯಿಂದಾನೇ ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಸುದೀಪ್ ಅವರ ಮುಂದೆಯೂ ಮುಚ್ಚು ಮರೆಯಿಲ್ಲದೆ ಮಾತಾಡಿ ಅವರ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಆಟದಲ್ಲೂ ಯಾವುದೇ ಗೇಮ್ ಪ್ಲ್ಯಾನ್ ಮಾಡಿಕೊಳ್ಳುವುದಿಲ್ಲ. ಆಟ ಆಡಬೇಕು ಅಷ್ಟೆ ಎಂಬ ಭಾವನೆ ಅವರದ್ದು.