ಬೆಂಗಳೂರು: ಇತ್ತಿಚೆಗೆ ಬಿಜೆಪಿ ಪಕ್ಷಕ್ಕೆ ಸೇರಲು ರೌಡಿಗಳು ಕಾಯುತ್ತಿರುವ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿತ್ತು. ಇದನ್ನು ವಿಪಕ್ಷ ನಾಯಕರು ವ್ಯಂಗ್ಯವಾಡಿದ್ದರು. ಅತ್ತ ಬಿಜೆಪಿ ನಾಯಕರು ಹಂಗೆಲ್ಲಾ ನಾವೂ ಸೇರಿಸಿಕೊಳ್ಳಲ್ಲ ಎನ್ನುವಾಗಲೇ ವಿಲ್ಸನ್ ಗಾರ್ಡನ್ ನಾಗ, ಸಚಿವ ವಜ ಸೋಮಣ್ಣ ಅವರ ಮನೆಗೆ ಭೇಟಿ ನೀಡಿದ್ದರು. ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು.
ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ, ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರೌಡಿಗಳನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಅವರಿಗೆ ಯಾವುದೇ ಥರಹದ ಪ್ರೋತ್ಸಾಹವನ್ನು ನೀಡಲ್ಲ, ಪಕ್ಷಕ್ಕೂ ಕರೆದುಕೊಳ್ಳಲ್ಲ. ನಮ್ಮ ನಿಲುವು ಸ್ಪಷ್ಟವಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ನಿನ್ನೆಯೆಲ್ಲಾ ಸುದ್ದಿಯಾದ ವಕ್ಫ್ ಬೋರ್ಡ್ ನಿಂದ ಸರ್ಕಾರದ ಅನುದಾನವನ್ನು ಪಡೆದು ಮುಸ್ಲಿಂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಾಲೇಜು ತೆರೆಯುವ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಈ ಬಗ್ಗೆ ನಮ್ಮ ಸರ್ಕಾರದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ಇದು ನಮ್ಮ ಸರ್ಕಾರದ ನಿಲುವು ಕೂಡ ಅಲ್ಲ. ಅಂತಹ ಪ್ರಸ್ತಾವನೆ ಇದ್ದರೆ ವಕ್ಫ್ ಬೋರ್ಡ್ ಅಧ್ಯಕ್ಷರೇ ಬಂದು ನನ್ನ ಬಳಿ ಚರ್ಚೆ ನಡೆಸಲಿ ಎಂದಿದ್ದಾರೆ.