ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್‍ನಲ್ಲಿ ಮಹಿಳೆಯರಿಗೆ ಯಾವುದೇ ಉಪಯೋಗವಾಗಿಲ್ಲ : ಮಾಳಮ್ಮ

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 15 : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳಾಗಿದ್ದರೂ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ, ದಬ್ಬಾಳಿಕೆ, ಅತ್ಯಾಚಾರ ಇನ್ನು ನಿಂತಿಲ್ಲ ಎಂದು ಸಂಜೀವಿನಿ ನೌಕರರ ಸಂಘ ಹಾಗೂ ಫಲಾನುಭವಿಗಳ ಸಂಘದ ರಾಜ್ಯ ಮುಖಂಡರಾದ ಮಾಳಮ್ಮ ತಿಳಿಸಿದರು.

ಸಿ.ಐ.ಟಿ.ಯು.ವತಿಯಿಂದ ಒನಕೆ ಓಬವ್ವ ವೃತ್ತದ ಸಮೀಪ ಶನಿವಾರ ನಡೆದ 117 ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ದ ಮಹಿಳೆಯರು ಹೋರಾಡಿದ ಇತಿಹಾಸವಿದೆ. ರೈತರು, ಮಹಿಳೆಯರು, ಕಾರ್ಮಿಕರನ್ನು ಬಿಟ್ಟು ದೇಶವಿಲ್ಲ. ಸ್ವಾತಂತ್ರ್ಯಕ್ಕಾಗಿ ಮಹಿಳೆಯರ ತ್ಯಾಗ, ಬಲಿದಾನವಿದೆ. ಮಹಿಳೆಯರ ಮೇಲಿನ ಅತ್ಯಾಚಾರ ಕಡಿಮೆಯಾಗಿಲ್ಲ. ಯಾವುದೇ ಸರ್ಕಾರ ಆಡಳಿತಕ್ಕೆ ಬರಲಿ ಮಹಿಳೆಯರ ರಕ್ಷಣೆ ಕುರಿತು ಚಿಂತಿಸುತ್ತಿಲ್ಲ. ಈ ಸಂಬಂಧ ಈಗಲಾದರೂ ಮಹಿಳೆಯರು ಎಚ್ಚೆತ್ತುಕೊಳ್ಳಬೇಕೆಂದು ಜಾಗೃತಿಗೊಳಿಸಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಏಳರಂದು ಮಂಡಿಸಿರುವ ಬಜೆಟ್‍ನಲ್ಲಿ ಮಹಿಳೆಯರಿಗೆ ಯಾವುದೇ ಉಪಯೋಗವಾಗಿಲ್ಲ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಬಜೆಟ್‍ನಲ್ಲಿ ಪ್ರತ್ಯೇಕ ಹಣ ಮೀಸಲಿಡಬೇಕೆಂದು ಒತ್ತಾಯಿಸಿದರು.

ಸಿ.ಐ.ಟಿ.ಯು.ಜಿಲ್ಲಾ ಸಂಚಾಲಕಿ ಎನ್.ನಿಂಗಮ್ಮ ಮಾತನಾಡಿ ಅನಾದಿ ಕಾಲದಿಂದಲೂ ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆ, ದೌರ್ಜನ್ಯ, ಅತ್ಯಾಚಾರ ಇನ್ನು ನಿಂತಿಲ್ಲ. ಅಗಸರಹಳ್ಳಿಯಲ್ಲಿ ಮೂರನೆ ತರಗತಿ ಬಾಲಕಿಗೆ ಐಸ್‍ಕ್ರೀಂ, ಚಾಕಲೇಟ್ ಆಸೆ ತೋರಿಸಿ ವೃದ್ದನೋರ್ವ ಅತ್ಯಾಚಾರವೆಸಗಿದ್ದಾನೆ. ಇದುವರೆವಿಗೂ ಕಾಮುಕನನ್ನು ಬಂಧಿಸಿಲ್ಲ. ಶಿಕ್ಷಣದಲ್ಲಿ ಮಹಿಳೆಗೆ ಸಮಾನತೆಯಿಲ್ಲ. ಕೇವಲ ಅಡುಗೆ ಕೋಣೆಗಷ್ಟೆ ಮಹಿಳೆಯನ್ನು ಮೀಸಲಿಡಲಾಗಿದೆ. ಎಲ್ಲಾ ರಂಗಗಳಲ್ಲಿಯೂ ಪುರುಷರಿಗೆ ಸಮಾನವಾಗಿ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ಹಾಗಾಗಿ ಮಹಿಳೆ ಎಚ್ಚೆತ್ತುಕೊಂಡು ತನ್ನ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಸಿ.ಐ.ಟಿ.ಯು. ಜಿಲ್ಲಾ ಸಂಚಾಲಕ ಡಿ.ಎಂ.ಮಲಿಯಪ್ಪ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತ ಮಹಿಳೆ ಮೇಲಿನ ದೌರ್ಜನ್ಯ, ಶೋಷಣೆ ವಿರುದ್ದ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಮಹಿಳೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆಯದಂತೆ ಸುರಕ್ಷತೆ ಕ್ರಮ ವಹಿಸಬೇಕು. ರಾತ್ರಿ ಪಾಳೆಯದಲ್ಲಿ ಮಹಿಳೆ ಕೆಲಸ ಮಾಡುವುದು ನಿಲ್ಲಬೇಕು. ಒಂದು ವೇಳೆ ಕೆಲಸ ಮಾಡಬೇಕಾದಂತ ಅನಿವಾರ್ಯತೆ ಕಂಡು ಬಂದಲ್ಲಿ ಸುರಕ್ಷಿತ ಪ್ರಯಾಣ ಮತ್ತು ಇತರೆ ಸೌಲತ್ತುಗಳನ್ನು ಒದಗಿಸುವಂತೆ ಮನವಿ ಮಾಡಿದರು.

ರಾಜಮ್ಮ, ಕೆ.ಮಂಜುಳ, ಇಂದಿರಮ್ಮ, ಕಲ್ಯಾಣಮ್ಮ, ಸಣ್ಣಮ್ಮ, ಚಂದ್ರಮ್ಮ, ಜಯಲಕ್ಷ್ಮಿ, ಹನುಮಕ್ಕ, ತನುಜ, ಟಿ.ತಿಪ್ಪೇಸ್ವಾಮಿ, ಸಿ.ಐ.ಟಿ.ಯು.ಸಂಚಾಲಕ ಸಿ.ಕೆ.ಗೌಸ್‍ಪೀರ್, ಟಿ.ನಿಂಗಣ್ಣ ಸೇರಿದಂತೆ ನೂರಾರು ಮಹಿಳೆಯರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *