ಬೆಂಗಳೂರು: ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿರುದ್ಧ ದಾಳಿ ಮಾಡಲು ಸ್ಪೀಕರ್ ಗೆ ಅನುಮತಿ ಕೇಳಿದ ಎಸಿಬಿ ಅಧಿಕಾರಿಗಳ ವಿಚಾರ ಇದೀಗ ಎಸಿಬಿ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ರಾಜ್ಯದಲ್ಲಿ ಒಂದೊಂದು ನ್ಯಾಯವಿದೆ. ನಮಗೊಂದು, ಬಿಜೆಪಿಯವರಿಗೊಂದು ಕಾನೂನಿದೆ ಎಂದಿದ್ದಾರೆ.
ಸ್ಪೀಕರ್ ಅನುಮತಿಯಿಲ್ಲದೆ ದಾಳಿ ಮಾಡಲಾಗಿದೆ. ಶಾಸಕ ಜಮೀರ್ ಮೇಲೆ ರೇಡ್ ಮಾಡ್ತಾರೆ. ಅವರ ಪಕ್ಷದವರಿಗೆ ಮಾತ್ರ ಸ್ಪೀಕರ್ ಅನುಮತಿ ಕೇಳಿದ್ದಾರೆ. ಎಸಿಬಿಯನ್ನ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಇದೊಂದೇ ಅಲ್ಲ ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಸರ್ಕಾರದ ವಿರುದ್ಧ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ವಿರುದ್ಧ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ. ಸಿದ್ದರಾಮಯ್ಯ ಕಾಲದಲ್ಲಿ ಅಕ್ರಮ ಅಂತಾರೆ. ಆಗ ಆಗಿದ್ದರೆ ಇವರು ಏನು ಮಾಡ್ತಿದ್ರು. ಕಡ್ಲೆ ಪುರಿ ತಿನ್ನುತ್ತಿದ್ರಾ? ಅನ್ಯಾಯ ಕೇಳಬೇಕಿತ್ತು. ಲೋಕಾಯುಕ್ತಕ್ಕೆ ದೂರು ನೀಡಬೇಕಿತ್ತು. ಏನೂ ನಡೆಯದಿದ್ದಕ್ಕೆ ದೂರು ಕೊಟ್ಟಿಲ್ಲ.
ಈಗ ಸುಮ್ಮನೆ ಹೇಳೋರು ಆಗ ಏನ್ಮಾಡ್ತಿದ್ರಿ, ಕಡ್ಲೆಕಾಯಿ, ಕಡ್ಲೆಪುರಿ ತಿನ್ನುತ್ತಿದ್ರಾ?. ಮೊದಲು ಇದನ್ನ ನಾವೇ ರೈಸ್ ಮಾಡಿದ್ದು. ನಾನು,ಪ್ರಿಯಾಂಕ್ ಖರ್ಗೆ ರೈಸ್ ಮಾಡಿದ್ವಿ. ಇದ್ರಲ್ಲಿ ಪೊಲೀಸ್ ಇಲಾಖೆಯವರೇ ಇದ್ದಾರೆ. ದೊಡ್ಡ ಭ್ರಷ್ಟಾಚಾರ ಆಗಿದೆ ಎಂದು ಹೇಳಿದ್ದೆವು. ಈಗ ಅವರದೇ ಸರ್ಕಾರವಿದೆ. ಅವರ ಮಂತ್ರಿಗಳನ್ನ ತನಿಖೆ ಮಾಡೋಕೆ ಬಿಡ್ತಾರಾ?. ಅದಕ್ಕೆ ಹಾಲಿ ನ್ಯಾಯಮೂರ್ತಿಗಳ ತನಿಖೆಯಾಗಬೇಕು. ಪ್ರಕರಣದ ಸತ್ಯಾಂಶ ಹೊರಬರಬೇಕು ಎಂದಜ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಒತ್ತಾಯಿಸಿದ್ದಾರೆ.