ಬೆಂಗಳೂರು: ಇಂದು ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಉಳಿದಿದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವವರಿಗೆ ದೇಶದ್ರೋಹದ ಸುಳ್ಳು ಆಪಾದನೆಯಡಿ ಜೈಲಿಗೆ ಅಟ್ಟಲಾಗುತ್ತಿದೆ.
ಕಳೆದು ಹತ್ತು ತಿಂಗಳುಗಳಿಂದ ರೈತರು ದೇಶಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮಾತುಕತೆಯ ಬದಲು, ಕ್ರೌರ್ಯ ಮತ್ತು ಬಲಪ್ರಯೋಗದ ಮೂಲಕ ಅವರ ಹೋರಾಟವನ್ನು ಅಂತ್ಯಗೊಳಿಸಲು ಹೊರಟಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂಬ ಕರೆ ನೀಡಿದರು. ರೈಲು ದುರಂತ ಸಂಭವಿಸಿದಾಗ ಘಟನೆಯ ನೈತಿಕ ಹೊಣೆ ಹೊತ್ತು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು. ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಎಂದರೆ ತಪ್ಪಿಲ್ಲ. ಈಗಿನ ರಾಜಕಾರಣದಲ್ಲಿ ನೈತಿಕತೆ ಎಂಬುದು ಕಣ್ಮರೆಯಾಗಿದೆ.
ಶಾಸ್ತ್ರಿ ಅವರು ಪ್ರಧಾನಿಯಾದ ಮೇಲೆ ಅವರ ಮಗ ಕೆಲಸ ಮಾಡುತ್ತಿದ್ದ ಕಂಪನಿ ಮುಂಬಡ್ತಿ ನೀಡಿತು ಎಂಬ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಹೇಳಿ, ಕೆಲಸ ಬಿಡುವಂತೆ ಮಾಡಿದ್ದರು. ಇಂತಹಾ ಪ್ರಾಮಾಣಿಕತೆ ಈಗಿನ ರಾಜಕಾರಣಗಳಲ್ಲಿ ಕಾಣಲು ಸಾಧ್ಯವೇ? ಬಿಜೆಪಿ ಆಡಳಿತದಲ್ಲಿ ದೇಶ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಇಂದು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗಾಂಧಿಯವರ ವಿಚಾರಧಾರೆಗಳು ನಮ್ಮ ಈ ಹೋರಾಟದ ಹಾದಿಗೆ ಬೆಳಕಾಗಲಿ ಎಂದು ಹಾರೈಸುತ್ತೇನೆ.
ಗಾಂಧೀಜಿಯವರನ್ನು ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಿಲ್ಲದಿದ್ದರೂ, ಅವರ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡೋಣ. ಇದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂಬುದು ನನ್ನ ಭಾವನೆ ಎಂದರು.