ಸುದ್ದಿಒನ್, ಚಿತ್ರದುರ್ಗ, ಸೆ. 07 : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಿರಿಯೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭೇಟಿ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಬುಧವಾರ ಪೂರ್ಣಿಮಾ ಶ್ರೀನಿವಾಸ್ ನಿವಾಸಕ್ಕೆ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮತನಾಡಿದ ಅವರು, ಶ್ರೀ ಕೃಷ್ಣ ಜನ್ಮಾಷ್ಟಮಿ ಇವರು ಕಾರಣ ನಾನು ಬಂದಿದ್ದೇನೆ. ಮಾಜಿ ಸಚಿವ ಎ.ಕೃಷ್ಣಪ್ಪನವರು ನನಗೆ ತುಂಬಾ ಆತ್ಮೀಯರು. ಅವರ ಮಗಳು ಪೂರ್ಣಿಮಾ ನನ್ನ ಸಹೋದರಿ. ಅವರ ಅಳಿಯ ಶ್ರೀನಿವಾಸ್ ಕೂಡಾ ನನಗೆ ಆತ್ಮೀಯರು ಎಂದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ನಂತರ ಸುದ್ದಿಗಾರರೊಂದಿಗೆ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಹಿರಿಯೂರು ಕ್ಷೇತ್ರದಿಂದ ಶಾಸಕಿಯಾಗಿ ಉತ್ತಮ ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ನನಗೆ ಅನುದಾನ ನೀಡಿದ್ದಾರೆ. ಆದರೂ, ಜನ ಮತ ನೀಡಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ನಾನು ಪಕ್ಷ ಬಿಡುತ್ತೇನೆಂದು ಎಲ್ಲೂ ಹೇಳಿಲ್ಲ. ನಾನು ಪಕ್ಷ ಬಿಡುವುದಿದ್ದರೆ ಬೇರೆಯವರಂತೆ ಕದ್ದು ಮುಚ್ಚಿ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದಿಂದ ನನಗೆ ಆಹ್ವಾನ ಇದೆ ಮುಂದೆ ಏನಾಗುತ್ತದೋ ನೋಡೋಣ’ ಎಂದು ಹೇಳಿದರು.